ಡಿ. 2ರಂದು ರಾಮಮಂದಿರಕ್ಕಾಗಿ ಉಡುಪಿಯಲ್ಲಿ ಜನಾಗ್ರಹ ಸಭೆ
ಉಡುಪಿ, ನ.30: ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ನಿರ್ಮಾಣ ಕ್ಕೆ ಕಾನೂನು ರೂಪಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಡಿ. 2ರಂದು ಜನಾಗ್ರಹ ಸಭೆ ನಡೆಯಲಿದ್ದು, ಇದರಲ್ಲಿ ವಿಹಿಂಪ ಪ್ರಮುಖ್ ಮಂಜುನಾಥ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದಾರ್ತಿ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಡಿ.2ರ ಕಾರ್ಯಕ್ರಮದ ವಿವರಗಳನ್ನು ನೀಡುತ್ತಾ ಈ ವಿಷಯ ತಿಳಿಸಿದರು. ಅಪರಾಹ್ನ 3:00ಕ್ಕೆ ಜೋಡುಕಟ್ಟೆಯಿಂದ ಹೊರಡುವ ಮೆರವಣಿಗೆಯು ಕೋರ್ಟು ರಸ್ತೆ, ಕೆಎಂ ಮಾರ್ಗ, ಕಿದಿಯೂರು ಹೋಟೆಲ್, ಸಿಟಿ ಬಸ್‌ನಿಲ್ದಾಣ, ಕಲ್ಸಂಕ ಮಾರ್ಗ ವಾಗಿ ಶ್ರೀಕೃಷ್ಣಮಠದ ರಾಜಾಂಗಣ ಬಳಿಯ ವಾಹನ ಪಾರ್ಕಿಂಗ್ ಪ್ರದೇಶಕ್ಕೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಭಜನಾ ಮಂಡಳಿಗಳು, ಚೆಂಡೆ ತಂಡಗಳು, ಪ್ರಚಾರ ವಾಹನ, ವೇಷಧಾರಿಗಳು, ಸಾಧು ಸಂತರು, ಗಣ್ಯರು, ಮಾತೆಯರ ಸಹಿತ 15,000ಕ್ಕೂ ಅಧಿಕ ರಾಮಭಕ್ತರು ಪಾಲ್ಗೊಳ್ಳುವರು ಎಂದವರು ತಿಳಿಸಿದರು.
ಇದಕ್ಕಾಗಿ ಕಲ್ಸಂಕ ರಾಯಲ್ ಗಾರ್ಡನ್, ಕ್ರಿಶ್ಚಿಯನ್ ಹೈಸ್ಕೂಲು ಮೈದಾನ, ಬೈಲಕೆರೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಂಜೆ 4ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಬಾಳ್ಕುದ್ರು ಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ, ಕಟಪಾಡಿ ಆನೆಗುಂದು ಮಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರ ಸಹಿತ ಜಿಲ್ಲೆಯ ಅನೇಕ ಯತಿಗಳು ಭಾಗವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತ ಸಹ ಕಾರ್ಯದರ್ಶಿ ರಾಘವಲು ಮುಖ್ಯ ಭಾಷಣಕಾರ ರಾಗಿರುವರು ಎಂದರು.
ಸುದ್ದಿಗೋಷ್ಟಿಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಸಹ ಸಂಚಾಲಕ ಸುಧೀರ್ ನಿಟ್ಟೆ, ಜಿಲ್ಲಾ ಸಾಪ್ತಾಹಿಕ್ ಪ್ರಮುಖ್ ಸುರೇಂದ್ರ ಕೋಟೇಶ್ವರ, ದುರ್ಗಾ ವಾಹಿನಿ ಜಿಲ್ಲಾ ಸಹ ಸಂಚಾಲಕಿ ಭಾಗ್ಯಶ್ರೀ ಐತಾಳ್ ಉಪಸ್ಥಿತರಿದ್ದರು.