ಭಾರತದೊಡನೆ ಸೌಹಾರ್ದ ಸಂಬಂಧ ಬೇಕಿದ್ದರೆ ಭಯೋತ್ಪಾದನೆಯನ್ನು ಹತ್ತಿಕ್ಕಿ ಮತ್ತು ಜಾತ್ಯತೀತ ರಾಷ್ಟ್ರವಾಗಿ

Update: 2018-11-30 17:04 GMT

ಪುಣೆ, ನ. 30: ಪಾಕಿಸ್ತಾನವು ಭಾರತದೊಂದಿಗೆ ಸೌಹಾರ್ದ ಸಂಬಂಧವನ್ನು ಬಯಸುತ್ತಿದ್ದರೆ ಅದು ತನ್ನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಬೇಕು ಮತ್ತು ತನ್ನನ್ನು ಜಾತ್ಯತೀತ ರಾಷ್ಟ್ರವಾಗಿ ರೂಪಿಸಿಕೊಳ್ಳಬೇಕು ಎಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಶುಕ್ರವಾರ ಇಲ್ಲಿ ಹೇಳಿದರು.

ನ್ಯಾಷನಲ್ ಡಿಫೆನ್ಸ್ ಅಕಾಡಮಿಯಲ್ಲಿ 135ನೇ ತಂಡದ ಪಾಸಿಂಗ್ ಔಟ್ ಪರೇಡ್‌ನ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಭಾರತವು ಒಂದು ಹೆಜ್ಜೆಯನ್ನು ಮುಂದಿರಿಸಿದರೆ ಎರಡು ಹೆಜ್ಜೆಗಳನ್ನು ಮುಂದಿರಿಸಲು ತನ್ನ ದೇಶವು ಸಿದ್ಧವಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಯ ಕುರಿತು ಪ್ರಶ್ನೆಗೆ, ಅದು ತನ್ನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟಹಾಕಲು ಮೊದಲ ಹೆಜ್ಜೆಗಳನ್ನಿರಿಸಬೇಕು ಎಂದು ಉತ್ತರಿಸಿದರು.

ಜರ್ಮನಿ ಮತ್ತು ಫ್ರಾನ್ಸ್‌ಗಳು ಒಳ್ಳೆಯ ನೆರೆಕರೆ ದೇಶಗಳಾಗಲು ಸಾಧ್ಯವಿದ್ದರೆ ಭಾರತ ಮತ್ತು ಪಾಕಿಸ್ತಾನಗಳೇಕೆ ಸ್ನೇಹಿತರಾಗಬಾರದು ಎಂಬ ಖಾನ್ ಹೇಳಿಕೆ ಕುರಿತಂತೆ ಅವರು,ಪಾಕಿಸ್ತಾನವು ಮೊದಲು ತನ್ನ ಆಂತರಿಕ ಸ್ಥಿತಿಯನ್ನು ನೋಡಿಕೊಳ್ಳುವ ಅಗತ್ಯವಿದೆ. ಅವರು ಪಾಕಿಸ್ತಾನವನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸಿದ್ದಾರೆ. ಅವರು ಭಾರತದ ಜೊತೆಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತಿದ್ದರೆ ತಮ್ಮನ್ನು ಜಾತ್ಯತೀತ ದೇಶವನ್ನಾಗಿ ರೂಪಿಸಿಕೊಳ್ಳಬೇಕು ಎಂದರು.

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ಹೋರಾಟಕ್ಕೆ ನಿಯೋಜಿಸುವ ಕುರಿತಂತೆ ಜ.ರಾವತ್ ಅವರು, ನಾವು ಅದಕ್ಕಿನ್ನೂ ಸಿದ್ಧರಾಗಿಲ್ಲ. ಸಶಸ್ತ್ರ ಪಡೆಗಳಲ್ಲಿ ಅಂತಹ ವಾತಾವರಣವನ್ನು ಇನ್ನಷ್ಟೇ ಸೃಷ್ಟಿಸಬೇಕಿದೆ ಮತ್ತು ಮಹಿಳೆಯರೂ ಅಂತಹ ಕಷ್ಟದ ಪಾತ್ರಗಳನ್ನು ನಿರ್ವಹಿಸಲು ಸಿದ್ಧರಾಗಬೇಕಿದೆ. ಅದು ಅಷ್ಟೊಂದು ಸುಲಭವಲ್ಲ. ನಮ್ಮನ್ನು ಪಾಶ್ಚಾತ್ಯ ದೇಶಗಳೊಂದಿಗೆ ಹೋಲಿಸಬೇಡಿ. ಅವು ಹೆಚ್ಚು ಮುಕ್ತವಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News