×
Ad

ಸುಜ್ಲಾನ್ ಕಂಪೆನಿಯ ಕಾರ್ಮಿಕರಿಗೆ ರಾಜಸ್ಥಾನಕ್ಕೆ ವರ್ಗಾವಣೆ: ಬೇಡಿಕೆ ಈಡೇರದಿದ್ದಲ್ಲಿ ಮುಷ್ಕರ ಎಚ್ಚರಿಕೆ

Update: 2018-11-30 22:53 IST

ಪಡುಬಿದ್ರಿ, ನ. 30: ಕಳದ ವರ್ಷ ನಷ್ಟವೆಂದು ಲಾಕ್‍ಔಟ್ ಘೋಷಿಸಿ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಸುಜ್ಲಾನ್ ಪವನ ವಿದ್ಯುತ್ ಯಂತ್ರ ತಯಾರಿಕಾ ಘಟಕವು ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಇಲ್ಲಿ ಕಾರ್ಮಿಕರಾಗಿ ದುಡಿಯುತಿದ್ದ 326 ಕಾರ್ಮಿಕರನ್ನು ಪೂರ್ವಮಾಹಿತಿ ನೀಡದೆ ರಾಜಸ್ಥಾನದ ಜೈಸಲ್ಮೇರ್ ಘಟಕಕ್ಕೆ ವರ್ಗಾವಣೆ ಮಾಡುವ ಮೂಲಕ ಮತ್ತೊಮ್ಮೆ ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿದೆ. 

ಈ ವರ್ಗಾವಣೆಯ ಬಳಿಕ ಇಂಟಕ್ ಸಂಘಟನೆ ಮಧ್ಯ ಪ್ರವೇಶಿಸಿ ಕಂಪನಿಯೊಂದಿಗೆ ಎರಡು ಬಾರಿ ಸಭೆ ನಡೆಸಿ ಶರ್ತಬದ್ಧ ವರ್ಗಾವಣೆಗೆ ಒಪ್ಪಿಗೆ ನೀಡಿದ್ದರು. ಈಗಿರುವ ವೇತನದ ಶೇ. 30ರಷ್ಟು ಹೆಚ್ಚಳ, ವಸತಿ ಸೌಲಭ್ಯ ಮತ್ತು ಸೆಕ್ಯುರಿಟಿ ನೀಡಿದಲ್ಲಿ ಸಾಮೂಹಿಕ ವರ್ಗಾವಣೆಗೆ ಕಾರ್ಮಿಕರು ಒಪ್ಪಿಗೆ ನೀಡಿದ್ದರು. ಆದರೆ ಆಡಳಿತ ವರ್ಗ ನಷ್ಟದ ನೆಪ ಹೇಳಿ ಕೇವಲ ಶೆ.5 ವೇತನ ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ನೀಡಿದ್ದರು. ಇದಕ್ಕೊಪ್ಪದ ಕಾರ್ಮಿಕರಿಗೆ ನ.19ರಂದು ಶೋಕಾಸ್ ನೋಟೀಸ್ ಜಾರಿ ಮಾಡಿ ನ.22ಕ್ಕೆ ಜೈಸಲ್ಮೇರ್‍ಗೆ ಹೋಗಿ ಕೆಲಸಕ್ಕೆ ಸೇರಲು ಆದೇಶ ನೀಡಿತ್ತು. ತಪ್ಪಿದಲ್ಲಿ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.

ಅಮಿಷ: ಕೆಲವು ಕಾರ್ಮಿಕರನ್ನು ಸಂಪರ್ಕಿಸಿದ ಕಂಪನಿಯು ಶಾಶ್ವತ ಕೆಲಸಕ್ಕೆ ರಾಜೀನಾಮೆ ನೀಡಿ ಗುತ್ತಿಗೆ ಆಧಾರದಲ್ಲಿ ಮತ್ತೆ ಕೆಲಸಕ್ಕೆ ಸೇರುವಂತೆ ಆಮಿಷ ಒಡ್ಡಿತ್ತು. ವರ್ಗಾವಣೆಯಾಗಲು ಇಷ್ಟವಿಲ್ಲದಿದ್ದರೆ ಅತೀ ಕಡಿಮೆ ಮೊತ್ತದ ಸಪರೇಶನ್ ಪ್ಯಾಕೇಜ್ ಆಮಿಷವನ್ನೂ ಒಡ್ಡಿತ್ತು ಎಂದು ಕಾರ್ಮಿಕರು ಆರೋಪಿಸಿದ್ದಾರೆ. 

ಸಭೆ: ಶನಿವಾರ ಸುಜ್ಲಾನ್ ಕಾರ್ಮಿಕ ಸಂಘಟನೆಯ ಮಹಾಸಭೆಯು ಪಡುಬಿದ್ರಿಯಲ್ಲಿ ಇಂಟಕ್ ಮುಖಂಡರು ಭಾಗವಹಿಸಿ ಕಾರ್ಮಿಕರಿಗೆ ಧೈರ್ಯ ತುಂಬಿದರು.

ದಕ ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ ಶೆಟ್ಟಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಕಂಪನಿಯು ಈಗಾಗಲೇ ಭೂಮಾಫಿಯಾ ಹುನ್ನಾರ ನಡೆಸುತ್ತಿದೆ. ಬೇರೆಯವರಿಗೆ ಜಾಗ ಮಾರಾಟಕ್ಕೆ ಮುಂದಡಿಯಿಟ್ಟಿದೆ. ಅಲ್ಲಿ ಬೇರೆ ಘಟಕ ಬಂದಲ್ಲಿ ಇದೇ ಕಾರ್ಮಿಕರಿಗೆ ಉದ್ಯೋಗದ ಭರವಸೆ ನೀಡಬೇಕು. ತಪ್ಪಿದಲ್ಲಿ ಜೈಸಲ್ಮೇರ್‍ಗೆ ಹೋಗಲು ಅವರು ಕೇಳಿಕೊಂಡ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಕಾರ್ಮಿಕ ಸಂಘಟನೆಗಳೊಂದಿಗೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಘಟಕದೆದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಬೇಡಿಕೆ ಈಡೇರದಿದ್ದಲ್ಲಿ ಮುಷ್ಕರ: ಜೈಸಲ್ಮೇರ್‍ಗೆ ಹೋಗುವ ತನಕ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಬೇಕು. ಡಿ. 1ರಂದು ವೇತನ ಪಾವತಿಯಾಗ ದಿದ್ದಲ್ಲಿ ಡಿ.7ರವರೆಗೆ ಕಾದು ಡಿಸೆಂಬರ್ 9ರಂದು ಘಟಕದ ಮುಂಭಾಗದಲ್ಲಿ ತೀವ್ರ ಮುಷ್ಕರ ಆರಂಭಿಸಲಾಗುವುದು ಎಂದವರು ಎಚ್ಚರಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ಇಂಟಕ್ ರಾಜ್ಯ ಸಂಘಟನೆಯ ಕಾರ್ಯದರ್ಶಿ ಸುರೇಶ್ ಮಾತನಾಡಿದರು. 

ಕಾರ್ಮಿಕರ ವಿವಾದ ಪರಿಹರಿಸಲು ಮಧ್ಯಪ್ರವೇಶಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News