ಕಲೆಯಿಂದ ಬದುಕಿನಲ್ಲಿ ನೆಮ್ಮದಿ ತೃಪ್ತಿ: ಡಾ.ಡಿ.ವೀರೇಂದ್ರ ಹೆಗ್ಡೆ
ಕೊಣಾಜೆ, ನ. 30: ಕಲೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ನೆಮ್ಮದಿ ತೃಪ್ತಿ ಸಿಗುತ್ತಿದೆ. ಪ್ರಮುಖವಾಗಿ ಶಿಕ್ಷಣ ಸಂಸ್ಥೆಗಳು ಇಂತಹ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಮುಡಿಪುವಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕರಾವಳಿಯ ಕಲಾವೈಭವ ಸೂರಜ್ ಕಲಾಸಿರಿ-2018 ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ನಾವು ಉಡುವ ಉಡುಪಿಕ್ಕಿಂತ ಮುಖ್ಯವಾಗಿ ನಮ್ಮ ಹೃದಯದಲ್ಲಿ ಭಾರತೀಯತೆಯನ್ನು ಬೆಳೆಸುವಂತಹ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕಲೆ, ಸಂಸ್ಕೃತಿಯ ಬಗ್ಗೆ ಕುತೂಹಲವನ್ನು ಹುಟ್ಟಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ನಿವೃತ್ತ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ತಪ್ಪು ಮಾಡಿದವರನ್ನು ಸಮಾಜವೇ ಶಿಕ್ಷಿಸಿ ತಿದ್ದುವ ಸಂದರ್ಭವಿತ್ತು. ಆದರೆ ಇಂದಿನ ಸಮಾಜದಲ್ಲಿ ಜೈಲಿಗೆ ಹೋಗಿ ಬಂದವರನ್ನೇ ಹಾರ ಹಾಕುವ ಪದ್ದತಿ ನಮ್ಮದು. ಇಂತಹ ಸಮಾಜವನ್ನು ಬದಲಾಯಿಸದಿದ್ದರೆ ಸಮಾಜಕ್ಕೆ ಕಂಟಕ ಖಂಡಿತ. ಆದ್ದರಿಂದ ಯುವ ಸಮುದಾಯದಲ್ಲಿ ಶಿಕ್ಷಣದೊಂದಿಗೆ ತೃಪ್ತಿ, ಮಾನವೀಯತೆಯನ್ನು ಬೆಳೆಸುವ ಕಾರ್ಯದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಶ್ರೀ ವಾಸುದೇವ ಅಸ್ರಣ್ಣ, ಕರ್ನಾಟಕ ಬ್ಯಾಂಕ್‍ನ ಮಹಾಬಲೇಶ್ವರ ಭಟ್ ಹಾಗೂ ಡಾ.ಅಣ್ಣಯ್ಯ ಕುಲಾಲ್ ಅವರನ್ನು ಸೂರಜ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮ್ಮೇಳನ ಸರ್ವಾಧ್ಯಕ್ಷರಾದ ಖ್ಯಾತ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಡಿಪು ಸೈಂಟ್ ಜೋಸೆಫ್ ವಾಝ್ ಚರ್ಚ್‍ನ ಧರ್ಮಗುರು ಬೆಂಜಮಿನ್ ಪಿಂಟೋ, ಇನ್‍ಫೋಸಿಸ್‍ನ ಡೆವಲಪವ್‍ಮೆಂಟ್ ಸೆಂಟರ್ ನ ವಾಸುದೇವ ಕಾಮತ್, ಹರಿಕೃಷ್ಣ ಪುನರೂರು, ವ್ಯವಸ್ಥಾಪಕರಾದ ಹೇಮಲತಾ ಎಂ.ರೇವಣ್ಕರ್, ಮುಖ್ಯೋಪಾಧ್ಯಾಯಿನಿ ವಿಮಲಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಮಂಜುನಾಥ್ ಎಸ್.ರೇವಣ್‍ಕರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿತೇಶ್ ಕಾರ್ಯಕ್ರಮ ನಿರೂಪಿಸಿದರು.