'ಭಾರತದ ಮುಸ್ಲಿಮರಿಗೆ ಹೊಸ ಚಿಂತನೆಯ ನಾಯಕತ್ವದ ಅಗತ್ಯವಿದೆ'
ಮಂಗಳೂರು, ಡಿ.1: ಭಾರತದ ಮುಸ್ಲಿಮರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯು ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸ್ಥಿತಿಗಿಂತಲೂ ಹೀನವಾಗಿದೆ. ಕೆಲವೇ ಕೆಲವು ರಂಗಗಳಲ್ಲಿ ಭಾರತದ ಮುಸ್ಲಿಮರ ಸ್ಥಿತಿಯು ಆಶಾದಾಯಕವಾಗಿ ಕಂಡರೂ ಕೂಡಾ ಒಟ್ಟು ದೇಶದ ಮುಸ್ಲಿಮರ ಪರಿಸ್ಥಿತಿ ಉತ್ತಮವಾಗಿಲ್ಲ. ಭಾರತದ ಮುಸ್ಲಿಮರನ್ನು ಈ ಸಂಕಷ್ಟದಿಂದ ಪಾರು ಮಾಡಲು ಹೊಸ ಚಿಂತನೆಯ ನಾಯಕತ್ವದ ಅಗತ್ಯವಿದೆ ಎಂದು ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.
ಅಭಿಮತ ಮಂಗಳೂರು ವತಿಯಿಂದ ನಗರದ ನಂತೂರಿನಲ್ಲಿರುವ ಶಾಂತಿ ಕಿರಣ ಸಭಾಂಗಣದಲ್ಲಿ ಶನಿವಾರ ನಡೆದ ‘ಜನನುಡಿ 2018’ರ ದ್ವಿತೀಯ ಗೋಷ್ಠಿಯಲ್ಲಿ ‘ಭಾರತದ ಮುಸ್ಲಿಮರು’ ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತದ ಮುಸ್ಲಿಮರ ರಾಜಕೀಯ ಸ್ಥಿತಿಯು ಅಧೋಗತಿಗಿಳಿದಿದೆ. ಜನಸಂಖ್ಯೆಗೆ ಅನುಗುಣವಾಗಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಅವರ ಪ್ರಾತಿನಿಧ್ಯ ಇಲ್ಲ. ಆಡಳಿತ, ನ್ಯಾಯಾಂಗ ವ್ಯವಸ್ಥೆಯಲ್ಲೂ ಹಿಂದೆ ಬಿದ್ದಿದ್ದಾರೆ. ಆದರೆ ಭಿಕ್ಷಾಟನೆ, ಜೈಲುಗಳಲ್ಲಿರುವವ ಸಂಖ್ಯೆ ಅವರ ಜನಸಂಖ್ಯೆಯ ಅನುಪಾತಕ್ಕಿಂತ ಅಧಿಕವಿರುವುದು ಅಂಕಿ ಅಂಶಗಳು ಉಲ್ಲೇಖಿಸುತ್ತಿರುವುದು ಗಮನಾರ್ಹ. ದೇಶದ ಮುಸ್ಲಿಮರ ಸಮಸ್ಯೆಯು ಇತರ ಸಮುದಾಯದ ಸಮಸ್ಯೆಗಿಂತ ಭಿನ್ನವಾಗಿಲ್ಲ. ಆದರೆ ಭಾರತದ ಮುಸ್ಲಿಮರು ಆಗಾಗ ಸ್ಪಷ್ಟಣೆ ಕೊಡಬೇಕಾದ ಪ್ರಮೇಯ ಎದುರಾಗುತ್ತಲೇ ಇದೆ. ಇದು ಕೂಡಾ ಹೊಸ ಸಮಸ್ಯೆಯಾಗಿ ಕಾಡಿದೆ ಎಂದು ಅಬ್ದುಸ್ಸಲಾಂ ಪುತ್ತಿಗೆ ಅಭಿಪ್ರಾಯಪಟ್ಟರು.
ಧಾರ್ಮಿಕ ವಿಷಯದಲ್ಲಿ ಮುಸ್ಲಿಮರು ಹೆಚ್ಚು ಭಾವುಕರಾಗುತ್ತಾರೆ. ಇದಕ್ಕೆ ಅವರ ಭಕ್ತಿ ಕಾರಣವಲ್ಲ. ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಭಾವನೆಯೇ ಇದಕ್ಕೆ ಕಾರಣವಾಗಿದೆ. ರಾಜಕಾರಣಿಗಳು ಮತ್ತು ಧಾರ್ಮಿಕ ವಿದ್ವಾಂಸರು ಅಮಾಯಕ ಮುಸ್ಲಿಮರನ್ನು ಆ ಸ್ಥಿತಿಗೆ ತಲುಪಿಸಿದ್ದಾರೆ ಎಂದು ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.
ಮುಸ್ಲಿಮರು ಸಾಮಾಜಿಕ, ಆರ್ಥಿಕ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟು ಬೀದಿಗಿಳಿದಾಗ, ಅಕ್ಷರಸ್ಥರಾಗಲು ಪಣತೊಟ್ಟಾಗ, ಎಲ್ಲಾ ಬಗೆಯ ಕೋಮುವಾದವನ್ನು ಪ್ರಶ್ನಿಸತೊಡಗಿದಾಗ ಮಾತ್ರ ಭಾರತದ ಮುಸ್ಲಿಮರ ಪರಿಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆಯನ್ನಿಟ್ಟುಕೊಳ್ಳಬಹುದಾಗಿದೆ ಎಂದು ಅಬ್ದುಸ್ಸಲಾಂ ಪುತ್ತಿಗೆ ನುಡಿದರು.
ಶಾಹಿನಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.