×
Ad

ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಒತ್ತು: ಜಯಮಾಲಾ

Update: 2018-12-01 20:32 IST

ಉಡುಪಿ, ಡಿ.1: ಕಲ್ಲುಕೋರೆ, ಮರಳುಗಾರಿಕೆ ಸೇರಿದಂತೆ ವಿವಿಧ ಖನಿಜ ಉತ್ಪನ್ನಗಳನ್ನು ತೆಗೆಯುವ ಪ್ರದೇಶಗಳಲ್ಲಿ ಉಂಟಾಗಿರುವ ಪ್ರಾಕೃತಿಕ ಅಸಮತೋಲನವನ್ನು ಸರಿಪಡಿಸಲು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯನ್ನು ಬಳಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣಿಗಾರಿಕೆ ಪರವಾನಿಗೆ ಪಡೆದ ಲೈಸನ್ಸ್‌ದಾರರು ಸರಕಾರಕ್ಕೆ ಕಟ್ಟುವ ರಾಜಧನದಲ್ಲಿ ಶೇ.10ರಷ್ಟು ಮೊತ್ತವನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಇಡಲಾಗುತ್ತದೆ. ಈ ನಿಧಿಯಿಂದ ಕಲ್ಲಕೋರೆ ಇರುವ ಪ್ರದೇಶದಲ್ಲಿ ಮೂಲ ಸೌಕರ್ಯ, ಆರೋಗ್ಯ, ಕುಡಿಯುವ ನೀರು, ವಿದ್ಯುತ್, ಶಾಲಾ ಅಂಗನವಾಡಿ ಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.

ಈ ನಿಧಿಯಡಿ ನಡೆಸಲಾಗುವ ಕಾಮಗಾರಿಗಳಿಗೆ ಆಯಾ ಕ್ಷೇತ್ರದ ಶಾಸಕ ರಿಂದ ಪ್ರಸ್ತಾವನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ರಾಜ್ಯ ಸರಕಾರ ಪ್ರತೀ ಜಿಲ್ಲೆಯಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಜಿಲ್ಲೆಯ ಶಾಸಕರು ಸೇರಿದಂತೆ ವಿವಿಧ ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎಂದು ಸಚಿವೆ ಜಯಮಾಲಾ ತಿಳಿಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಸುಮಾರು 1.36 ಕೋಟಿ ರೂ. ಗಳಿವೆ. ಆಯಾ ಗಣಿಬಾಧಿತ ಗ್ರಾಮಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿ ಇದರಲ್ಲಿ ಕೈಗೆತ್ತಿಕೊಳ್ಳಬಹುದಾಗಿದೆ. ಶಾಲಾ- ಅಂಗನವಾಡಿಗಳ ದುರಸ್ತಿಗೂ ಅವಕಾಶವಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯ 25 ಶಾಲೆಗಳನ್ನು ಹಾಗೂ 11 ಅಂಗನವಾಡಿಗಳನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪ್‌ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News