ಎಮರ್ಜೆನ್ಸಿ ಮೊಬೈಲ್ ಆ್ಯಪ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ವ್ಯವಸ್ಥೆ: ರಾಜನಾಥ್ ಸಿಂಗ್

Update: 2018-12-01 15:59 GMT

ಕೊಹಿಮಾ, ಡಿ.1: ದೇಶಾದ್ಯಂತ ಕಾರ್ಯನಿರ್ವಹಿಸುವ ಏಕ ಸಂಖ್ಯೆಯ ಎಮರ್ಜೆನ್ಸಿ ಮೊಬೈಲ್ ಆ್ಯಪ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಈ ಮೂಲಕ ಪೊಲೀಸರ ಅಥವಾ ಸ್ವಯಂ ಸೇವಕರ ತುರ್ತು ನೆರವು ಪಡೆಯಬಹುದಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

‘112 ಇಂಡಿಯಾ’ ಎಂಬ ಮೊಬೈಲ್ ಆ್ಯಪ್‌ನಲ್ಲಿ ‘ಶೌಟ್’ ಎಂಬ ವ್ಯವಸ್ಥೆಯನ್ನು ಮಹಿಳೆಯರಿಗಾಗಿ ಅಳವಡಿಸಲಾಗಿದೆ. ಇದು ತುರ್ತು ಪ್ರತಿಸ್ಪಂದನೆ ವ್ಯವಸ್ಥೆ(ಇಆರ್‌ಎಸ್‌ಎಸ್)ಗೆ ಸಂಯೋಜನೆಗೊಂಡಿದೆ ಎಂದು ನಾಗಾಲ್ಯಾಂಡ್‌ನಲ್ಲಿ ಎಮರ್ಜೆನ್ಸಿ ಆ್ಯಪ್‌ಗೆ ಚಾಲನೆ ನೀಡಿದ ಬಳಿಕ ನಡೆದ ಸಭೆಯಲ್ಲಿ ಸಚಿವರು ತಿಳಿಸಿದರು. ‘ಶೌಟ್’ ವ್ಯವಸ್ಥೆ ಬಳಸುವ ಮೂಲಕ ಸಮೀಪದ ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳು ಅಥವಾ ತುರ್ತು ಪ್ರತಿಸ್ಪಂದನಾ ಕೇಂದ್ರದ ನೆರವನ್ನು ಪಡೆಯಬಹುದಾಗಿದೆ. ಜಿಪಿಎಸ್ ಸಂಪರ್ಕ ಹೊಂದಿರುವ ಕಾರಣ ಪ್ರತಿಸ್ಪಂದಕರು ಅಪಾಯದಲ್ಲಿರುವ ಮಹಿಳೆ ಇರುವ ಸ್ಥಳವನ್ನು ತಕ್ಷಣ ಪತ್ತೆಹಚ್ಚಿ ಅಲ್ಲಿಗೆ ಧಾವಿಸಲು ಅನುಕೂಲವಾಗುತ್ತದೆ ಎಂದವರು ಹೇಳಿದರು.

ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಭಾರತದಲ್ಲಿದ್ದಾರೆ ಮತ್ತು ಮಹಿಳೆಯರು ಸುರಕ್ಷಿತವಾಗಿರುವ ದೇಶದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲಾಗದು. ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ, ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ಕೇಂದ್ರ ಸರಕಾರ ತ್ವರಿತ ನ್ಯಾಯಾಲಯ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News