ಪಾಕಿಸ್ತಾನಕ್ಕೆ ಹೋಗಲು ರಾಹುಲ್ ಸೂಚಿಸಿಲ್ಲ: ಸಿಧು

Update: 2018-12-01 16:12 GMT

ಹೊಸದಿಲ್ಲಿ, ನ. 1: ತಾನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಕರ್ತಾರಪುರ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಪಂಜಾಬ್‌ನ ಸಂಪುಟ ಸಚಿವ ನವಜೋತ್ ಸಿಂಗ್ ಸಿಧು ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವೈಯುಕ್ತಿಕ ಆಹ್ವಾನದಂತೆ ತಾನು ಕರ್ತಾರಪುರ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ ಎಂದು ಸಿಧು ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದಾರೆ. ಕರ್ತಾರಪುರ ಕಾರಿಡರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಧು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪ್ರಶಂಸಿಸಿರುವುದು ಹಾಗೂ ಖಲಿಸ್ತಾನ ನಾಯಕರೊಂದಿಗೆ ಫೋಟೊ ತೆಗೆದುಕೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಧು, ‘‘ನನ್ನ ಕ್ಯಾಪ್ಟನ್ ರಾಹುಲ್ ಗಾಂಧಿ. ಅವರು ನನ್ನನ್ನು ಎಲ್ಲೆಡೆ ಕಳುಹಿಸುತ್ತಾರೆ’’ ಎಂದಿದ್ದರು.

ಪಾಕಿಸ್ತಾನಕ್ಕೆ ಭೇಟಿ ನೀಡುವಾಗ ನೀವು ನಿಮ್ಮ ಕ್ಯಾಪ್ಟನ್ ಸಲಹೆಯನ್ನು ಯಾಕೆ ನಿರ್ಲಕ್ಷಿಸಿದಿರಿ ಎಂದು ಅವರನ್ನು ಪತ್ರಕರ್ತರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಧು, ‘‘ಒ. ಕ್ಯಾಪ್ಟನ್ ಅಮರಿಂದರ್ ಸಿಂಗ್. ಅವರು ಸೇನಾ ಕ್ಯಾಪ್ಟನ್. ನನ್ನ ಕ್ಯಾಪ್ಟನ್ ರಾಹುಲ್ ಗಾಂಧಿ. ಕ್ಯಾಪ್ಟನ್‌ನ ಕ್ಯಾಪ್ಟನ್ ಕೂಡ ರಾಹುಲ್ ಗಾಂಧಿ’’ ಎಂದು ವ್ಯಂಗ್ಯವಾಗಿ ಹೇಳಿದ್ದರು. ಭಾರತದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ನಿರಂತರ ಬೆಂಬಲ ನೀಡುತ್ತಿರುವುದನ್ನು ಉಲ್ಲೇಖಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಾಕಿಸ್ತಾನದ ಆಹ್ವಾನ ತಿರಸ್ಕರಿಸಿದ್ದರು. ಸಿಧು ಪಾಕಿಸ್ತಾನಕ್ಕೆ ಭೇಟಿ ನೀಡುವ ಬಗ್ಗೆ ಕೂಡ ಅವರು ಅಸಮಾಧಾನ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News