ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎನ್ನುವ ಕಾಲವಿದು: ಜಾನಪದ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಖೇದ
ಮಂಗಳೂರು, ಡಿ.1: ಇಂದು ತುಳುನಾಡಿನ ದೈವವಾದ ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎಂದು ಸುದ್ದಿ ಹಬ್ಬಿಸಲಾಗಿದೆ. ರಾಮಾಯಣದ ಬಗ್ಗೆ ಮಾತನಾಡಿದರೆ ತಮ್ಮ ಭಾವನೆಗಳಿಗೆ ಧಕ್ಕೆಯಾಯಿತು ಎನ್ನುವುದಾದರೆ, ಬಬ್ಬರ್ಯನ ಇತಿಹಾಸವನ್ನು ತಿರುಚಿದರೆ ನಮಗೆ ನೋವಾಗುವುದಿಲ್ಲವೇ ? ಎಂದು ಖ್ಯಾತ ಜಾನಪದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಪ್ರಶ್ನಿಸಿದ್ದಾರೆ.
ನಗರದ ಶಾಂತಿಕಿರಣ ಸಭಾಂಗಣದಲ್ಲಿ ಇಂದು ಜನನುಡಿಯ ‘ಭವಿಷ್ಯದ ಭಾರತ: ಮಾಕ್ಸ್- ಅಂಬೇಡ್ಕರ್- ಗಾಂಧಿ- ಲೋಹಿಯಾ’ ಎಂಬ ವಿಷಯದ ಗೋಷ್ಠಿಯಲ್ಲಿ ಅಂಬೇಡ್ಕರ್ ವಿಚಾರಧಾರೆ ಕುರಿತು ಅವರು ಮಾತನಾಡಿದರು.
ಇಂದು ಕರಾವಳಿಯಲ್ಲಿ ಯಕ್ಷಗಾನ ಕೂಡ ದಾರಿತಪ್ಪಿದೆ. ರಾಮ ವಿಜಯ ಎನ್ನುವುದು ರಾವಣ ವಧೆ, ವಾಲಿವಧೆ ಎಂದು ನೆಗೆಟಿವ್ ಶೀರ್ಷಿಕೆಗಳಿಂದ ಗುರುತಿಸಲ್ಪಡುತ್ತಿದೆ. ಅದಕ್ಕೆ ಕರಾವಳಿಯಲ್ಲಿ ಖಳರಿಗೆ ಮಣೆ ಹಾಕುತ್ತಿರುವುದೇ ಕಾರಣ ಎಂದು ಬಿಳಿಮಲೆಯವರು ಹೇಳಿದರು.
ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಮೌನವಾಗಿರುವಾಗ, ರೈತರು ನ್ಯಾಯಕ್ಕಾಗಿ ಪ್ರತಿಭಟಿಸುವುದಕ್ಕೆ ಅಧಿಕಾರದಲ್ಲಿರುವ ಯಾರೊಬ್ಬರೂ ಪ್ರತಿಕ್ರಿಯಿಸದಿರುವಾಗ ನೋವಾಗುತ್ತದೆ ಎಂದು ಹೇಳಿದ ಅವರು, ಪರಿಸ್ಥಿತಿ ಹೀಗಾದರೆ ವರ್ತಮಾನದ ಭಾರತದ ಅಪಾಯದ ಬಗ್ಗೆ ಆತಂಕವಾಗುತ್ತದೆ ಎಂದರು.
ಧರ್ಮವನ್ನು ಒಪ್ಪಿಕೊಂಡು ಅದರಲ್ಲಿನ ಹುಳುಕುಗಳನ್ನು ಪ್ರಶ್ನೆ ಮಾಡಬೇಕು ಎನ್ನುವುದು ಅಂಬೇಡ್ಕರ್ ವಾದ. ಆ ನಿಟ್ಟಿನಲ್ಲಿ ನೋಡುವುದಾದರೆ, ಎಲ್ಲ ಹಿಂದೂಗಳು ಒಂದು ಎನ್ನುವರನ್ನು ನಾವು ಪ್ರಶ್ನಿಸಬಹುದು ಎಂದರು.
ಗೋಷ್ಠಿಯಲ್ಲಿ ಮುಝಾಫರ್ ಅಸ್ಸಾದಿ ಅವರು ಗಾಂಧಿಯ ಬಗ್ಗೆ ಮಾತನಾಡುತ್ತಾ, ಮಹಾತ್ಮನ ಕುರಿತಾದ ನಂಬಿಕೆ ಹೇಗೆ ಕಾಲಕಾಲಕ್ಕೆ ಬದಲಾಗಿದೆ ಎ್ನುವುದನ್ನು ವಿವರಿಸಿದರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಶಾಂತಿ, ಅಹಿಂಸೆಯ ಪ್ರತೀಕವಾಗಿದ್ದ ಗಾಂಧಿ ಇಂದು, ಬಣ್ಣದ ನೋಟುಗಳ ಸಂಕೇತವಾಗಿದ್ದಾರೆ. ಕಲ್ಪಿತ ಗಾಂಧಿಯಾಗಿ, ನೆನಪಾಗುವ ಗಾಂಧಿಯಾಗಿ ಸೀಮಿತಗೊಳ್ಳುತ್ತಾ ಇಂದು ಗಾಂಧಿ ತತ್ವಗಳು ನಗಣ್ಯವಾಗುತ್ತಿವೆ. ಮುಂದೆ ಗಾಂಧಿ ಹಿಂದುತ್ವದ ಗಾಂಧಿ ಆಗುವ ಆತಂಕವನ್ನು ಅಲ್ಲಗಳೆಯಲಾಗದು ಎಂದು ಮುಝಾಫರ್ ಅಸ್ಸಾದಿ ವಿಷಾದಿಸಿದರು.
ಇಂತಹ ವ್ಯವಸ್ಥೆಯಲ್ಲಿ ಗಾಂಧಿ, ಅಂಬೇಡ್ಕರ್, ನೆಹರೂ ಮಾಕ್ಸ್, ಮೌಲಾನಾ ಆಝಾದ್ ಅವರ ಚಿಂತನೆಗಳನ್ನು ಒಳಗೊಂಡ ಹೊಸ ತತ್ವ ಭವಿಷ್ಯದ ಭಾರತಕ್ಕೆ ಸಹಕಾರಿಯಾಗಬಲ್ಲದು ಎಂದು ಅವರು ಆಶಿಸಿದರು. ಶ್ರುತಿ ನೆಲಮಾಕಹಳ್ಳಿ ಗೋಷ್ಠಿಯನ್ನು ನಿರ್ವಹಿಸಿದರು.