ಉಡುಪಿ: ಶಾಲಾ ವಿದ್ಯಾರ್ಥಿಗಳ ಚಿಣ್ಣರ ಮಾಸೋತ್ಸವ ಉದ್ಘಾಟನೆ
ಉಡುಪಿ, ನ.30: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಚಿಣ್ಣರ ಸಂತರ್ಪಣೆಯ ಶಾಲೆಯ ವಿದ್ಯಾರ್ಥಿಗಳಿಂದ ಒಂದು ತಿಂಗಳ ಕಾಲ ಮಧ್ವ ಮಂಟಪದಲ್ಲಿ ನಡೆಯುವ ಚಿಣ್ಣರ ಮಾಸೋತ್ಸವ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಗರ್ಭಗುಡಿಯೊಳಗೆ ಬಾಲಕೃಷ್ಣನ ಪ್ರತಿಮೆ ಯಲ್ಲಿ ದೇವರನ್ನು ಕಂಡರೆ ಹೊರಗಿನಿಂದ ಪುಟಾಣಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ದೇವರನ್ನು ಕಾಣಬಹುದು. ಇದು ಶ್ರೀಕೃಷ್ಣನ ಪೂಜೆಗೆ ಸಮಾನ ಎಂದು ಹೇಳಿದರು.
ಉತ್ತಮ ಆಹಾರಗಳ ಸೇವನೆ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆ ಸಾಧ್ಯವಾಗುತ್ತದೆ. ಒಂದು ತಿಂಗಳುಗಳ ಕಾಲ ಇಲ್ಲಿ ನಡೆಯುವ ಯಕ್ಷಗಾನ ಮತ್ತು ಭಾರತೀಯ ಪರಂಪರೆಯ ಸಾಂಸ್ಕೃತಿಕ ಕಲೆಯಿಂದ ಮಕ್ಕಳ ಜ್ಞಾನ ವೃದ್ಧಿ ಆಗಲಿ ಎಂದು ಅವರು ಹಾರೈಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಚಿಣ್ಣರ ಅನ್ನ ಸಂತರ್ಪಣೆ ಆರಂಭಿಸಿರುವ ಪಲಿಮಾರು ಸ್ವಾಮೀಜಿ ಇಡೀ ದೇಶಕ್ಕೆ ಮಾದರಿ ಯಾಗಿದ್ದಾರೆ. ಇಂದು ಭಾರತದಲ್ಲಿ ಪ್ರತಿದಿನ 12ಕೋಟಿ ಹಸಿದ ವಿದ್ಯಾರ್ಥಿ ಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಜಾರಿಯಲ್ಲಿದೆ. ಇದಕ್ಕೆಲ್ಲ ಉಡುಪಿ ಶ್ರೀಕೃಷ್ಣ ಮಠವೇ ಪ್ರೇರಣೆಯಾಗಿದೆ ಎಂದು ಹೇಳಿದರು.
ತೀರ್ಪುಗಾರರಾದ ನಾರಾಯಣ, ಅಜಿತ್ ಕುಮಾರ್, ಚಿಣ್ಣರ ಸಂತ ರ್ಪಣೆಯ ಶಾಲಾ ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಉಪಸ್ಥಿತರಿ ದ್ದರು. ಮಠದ ದಿವಾಣ ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿದರು. ನಿರ್ಮಲ್ ಕುಮಾರ್ ವಂದಿಸಿದರು. ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ ಮಾಡ ಕಾರ್ಯಕ್ರಮ ನಿರೂಪಿಸಿದರು. ಈ ಸ್ಪರ್ಧೆಯಲ್ಲಿ ಒಟ್ಟು 130 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.