ಡಿ.12, 13ರಂದು ಬೆಂಗಳೂರಿನಲ್ಲಿ ಅಂಬೇಡ್ಕರ್ ಪರಿನಿಬ್ಬಾಣ ದಿನ: ಮಾವಳ್ಳಿ ಶಂಕರ್

Update: 2018-12-02 08:02 GMT

ಮಂಗಳೂರು, ಡಿ.2: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ವತಿಯಿಂದ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 62ನೇ ಪರಿನಿಬ್ಬಾಣ ದಿನ ಹಾಗೂ ರಾಜ್ಯ ಸರ್ವ ಸದಸ್ಯರ ಮಹಾಸಭೆಯು ಡಿ.12 ಮತ್ತು 13ರಂದು ಬೆಂಗಳೂರಿನ ದೇವನಹಳ್ಳಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಲಿದ್ದು, ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ನ್ಯಾ.ನಾಗಮೋಹನ್ ದಾಸ್ ಆಗಮಿಸಲಿದ್ದು, ಚಿಂತಕ ದಿನೇಶ್ ಅಮಿನ್ ಮಟ್ಟು, ದಸಂಸ ರಾಜ್ಯ ಸಮಿತಿಯ ಮಹಿಳಾ ಒಕ್ಕೂಟದ ಇಂದಿರಾ ಕೃಷ್ಣಪ್ಪ, ರುದ್ರಪ್ಪ ಹನಗವಾಡಿ, ಅರ್ಥಶಾಸ್ತ್ರಜ್ಞರ ಪ್ರೊ.ಕೇಶವ್ ಭಾಗವಹಿಸಲಿದ್ದಾರೆ.

ಡಿ.12ರಂದು ಪೂರ್ವಾಹ್ನ 11 ಗಂಟೆಗೆ ಅಂಬೇಡ್ಕರ್ ಪರಿನಿಬ್ಬಾಣದ ಮೆರವಣಿಗೆಯು ಟಿಪ್ಪು ಜನ್ಮ ಸ್ಥಳದಿಂದ ಪ್ರಾರಂಭವಾಗಿ ಮಿನಿವಿಧಾನಸೌಧ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಂಬೇಡ್ಕರ್ ಭವನವನ್ನು ತಲುಪಲಾಗುವುದು ಎಂದು ಮಾವಳ್ಳಿ ಶಂಕರ್ ತಿಳಿಸಿದರು.

ಸಂವಿಧಾನವನ್ನು ಬದಲಿಸಲು ಕೋಮುವಾದಿಗಳು ಹಠ ತೊಟ್ಟಂತೆ ಕೇಸರಿ ಖಡ್ಗವನ್ನು ಝಳಪಿಸುತ್ತಿದ್ದಾರೆ. ಭಾರತದ ಭವಿಷ್ಯ ಎಂದಿಗಿಂತಲೂ ಅತ್ಯಂತ ಅಪಾಯದಲ್ಲಿದೆ ಎನ್ನುವುದನ್ನು ಸಾಬೀತುಪಡಿಸಲು ಸಾಕಷ್ಟು ಘಟನಾವಳಿಗಳು ನಿತ್ಯವೂ ನಡೆಯುತ್ತಲೇ ಇವೆ. ಸ್ವಾಭಿಮಾನದ ಬದುಕಿಗಾಗಿ ತಲೆ ಎತ್ತುವ ದಲಿತರನ್ನು ದಮನಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಮನುವ್ಯಾಧಿಯು ಸಾಂಕ್ರಾಮಿಕ ರೋಗದಂತೆ ಸಾಮಾಜಿಕ ವಲಯದಲ್ಲಿ ಹರಡುತ್ತಿದೆ ಎಂದು ತಿಳಿಸಿದರು.

ಸಂವಿಧಾನ ಸಂಸ್ಥೆಗಳಾದ ಆರ್‌ಬಿಐ, ಸಿಬಿಐ, ಚುನಾವಣಾ ಆಯೋಗ, ಸಿವಿಸಿ ಮುಂತಾದ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರ್ಬಲಗೊಳಿಸುತ್ತಿದೆ. ಸಾಮಾಜಿಕವಾಗಿ ಹಿಂದುಳಿದ/ ದಲಿತ ವರ್ಗಗಳಿಗೆ ಸಾಂವಿಧಾನಿಕವಾಗಿ ಸಿಕ್ಕಿರುವ ಮೀಸಲಾತಿಯ ವಿರುದ್ಧ ಮೇಲ್ವರ್ಗಗಳನ್ನು ಎತ್ತಿ ಕಟ್ಟುವ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರದ ಜನವಿರೋಧಿ ನಿಲುವುಗಳ ವಿರುದ್ಧ ವ್ಯಾಪಕ ಸಂಘಟಿತ ಹೋರಾಟಗಳನ್ನು ರೂಪಿಸಲು ವೈಜ್ಞಾನಿಕ ದೃಢತೆಯಿಂದ ಸಂಘಟನೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಹೇಳಿದರು.

ಮಹಾ ಅಧಿವೇಶನದಲ್ಲಿ ರಾಜ್ಯದ ಪ್ರಗತಿಪರ ಚಿಂತಕರು, ಜನ ಚಳವಳಿಗಳ ಮುಖಂಡರು, ಸಾಂಸ್ಕೃತಿಕ ಲೋಕದ ಪ್ರಸಿದ್ಧ ಹಾಡುಗಾರರು, ಕಲಾವಿದರು ಭಾಗವಹಿಸಲಿದ್ದಾರೆ. ರಾಜ್ಯಾದ್ಯಂತ ದಸಂಸದ ರಾಜ್ಯ, ವಿಭಾಗೀಯ, ಜಿಲ್ಲಾ, ತಾಲೂಕು ಹಂತದ ಪದಾಧಿಕಾರಿಗಳು, 1,500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯಿಂದ 250ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಬಿ.ಕೆ. ವಸಂತ್, ವಿಭಾಗೀಯ ಸಂಘಟನಾ ಸಂಚಾಲಕ ಚಂದು ಆರ್., ಜಿಲ್ಲಾ ಸಂಘಟನಾ ಸಂಚಾಲಕ ಜಗದೀಶ್ ಪಾಂಡೇಶ್ವರ್, ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News