ಸರಕಾರ, ಸಮಾಜದಿಂದ ಕೊರಗರ ಪ್ರಗತಿ ಸಾಧ್ಯ: ಪೇಜಾವರ ಶ್ರೀ

Update: 2018-12-02 12:02 GMT

ಉಡುಪಿ, ಡಿ.2: ಕೊರಗ ಸಮುದಾಯದ ಪ್ರಗತಿಗಾಗಿ ಸರಕಾರ ಮತ್ತು ಸಮಾಜ ಒಗ್ಗೂಡಿ ಕೆಲಸ ಮಾಡಬೇಕು. ಎಲ್ಲರು ಒಂದಾಗಿ ಕೊರಗ ಸಮುದಾಯದ ಉನ್ನತಿಗೆ ಶ್ರಮಿಸುವ ಮೂಲಕ ಅವರ ಬದುಕಿನಲ್ಲಿ ಮೆರುಗು ತರಬೇಕು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಂಚಿಕೋಡಿಯ ಮಂಜುಶ್ರೀ ನಗರದ ಭಾಗ್ಯಶ್ರೀ ಕೊರಗ ಸಮುದಾಯ ಭವನದಲ್ಲಿ ರವಿವಾರ ಆಯೋಜಿಸಲಾದ ಕೊಗರ ಸಮುದಾಯದೊಂದಿಗೆ ಸೌಹಾರ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಗ್ರಾಮೀಣ ಜ್ಞಾನದ ಅಗತ್ಯತೆ’ ವಿಷಯದ ಕುರಿತು 35ಸಾವಿರ ಕಿ.ಮೀ. ಪಾದಯಾತ್ರೆ ಮೂಲಕ ಭಾರತಕ್ಕೆ ಪ್ರದಕ್ಷಿಣೆ ಬಂದ ಸಾಧಕ ಸೀತಾರಾಮ ಕೆದ್ಲಾಯ ದಿಕ್ಸೂಚಿ ಭಾಷಣ ಮಾಡಿ, ಇಂದು ದೇಶದಲ್ಲಿ ನಡೆಯುತ್ತಿರುವ ವಿಕೃತಿ ಹಾಗೂ ಕಲಹಗಳಿಗೆ ಅಜ್ಞಾನವೇ ಕಾರಣವಾಗಿದ್ದು, ಆ ಅಜ್ಞಾನವನ್ನು ದೂರ ಮಾಡಲು ಭಾರತ ನಿಜವಾದ ಆತ್ಮವಾಗಿರುವ ಹಳ್ಳಿಗಳ ಕಡೆ ಹೋಗಬೇಕು ಮತ್ತು ಅದನ್ನು ಪ್ರೀತಿಸಬೇಕು ಎಂದರು.

ಹಳ್ಳಿಗಳ ಬದುಕಿನಲ್ಲಿ ನಿಜವಾದ ಭಾರತದ ಸ್ವರೂಪವನ್ನು ಕಾಣಬಹುದು. ಇದು ಅಮ್ಮಂದಿರು ತಮ್ಮ ಮಕ್ಕಳಿಗೆ ಹೇಳಿಕೊಟ್ಟ ಸಂಸ್ಕಾರದ ಪಾಠದಿಂದ ಸಾಧ್ಯವಾಗಿದೆ. ಮನುಷ್ಯನು ಎಲ್ಲರಿಗಾಗಿ ತೆರೆದುಕೊಂಡಾಗ ದೇವ ಮಾನವನಾಗುತ್ತಾನೆ. ಹೆಣ್ಣನ್ನು ಅಮ್ಮನಂತೆ ಕಾಣುವ ವಿಶೇಷ ಸಂಸ್ಕೃತಿ ಈಗಲೂ ದೇಶದ ಅನೇಕ ಹಳ್ಳಿಗಳಲ್ಲಿವೆ ಎಂದು ಅವರು ಹೇಳಿದರು.

ಉತ್ತಮ ಸಂಸ್ಕೃತಿ, ಆಚಾರ, ವಿಚಾರಗಳು ಶೇ.95ರಷ್ಟು ಹಳ್ಳಿಗಳಲ್ಲಿ ಈಗಲೂ ಉಳಿದುಕೊಂಡಿವೆ. ಕೇವಲ ಶೇ.5ರಷ್ಟಿರುವ ಕೆಟ್ಟ ವಿಚಾರವನ್ನು ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಬಿಂಬಿಸುತ್ತಿರುವುದನ್ನೇ ನೋಡಿ ಇಡೀ ಸಮಾಜ ಹಾಳಾಗಿದೆ ಎಂಬುದು ಹೇಳುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಉಡುಪಿ ಶಾಸಕ ಕೆ.ರಘಪತಿ ಭಟ್, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಸಂಘಟಕಿ ರಮ್ಯ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮಂಜುಶ್ರೀ ನಗರದ ಪಿ.ಸುಂದರ ಗುರಿಕಾರ ವಹಿಸಿದ್ದರು.

ಈ ಸಂದರ್ಭದಲ್ಲಿ ಕೊರಗ ದಂಪತಿಗಳಿಗೆ ವಸ್ತ್ರ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಕಾರ್ಯಕ್ರಮ ಸಂಘಟಕ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯ ಅಶೋಕ್ ನಾಯ್ಕ ಸ್ವಾಗತಿಸಿದರು. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಸಾವಯವ ಧಾನ್ಯ/ತರಕಾರಿಗಳಿಂದ ಕೊರಗರೇ ತಯಾರಿಸಿದ ಭೋಜನವನ್ನು ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ, ಜಯ ಪ್ರಕಾಶ್ ಹೆಗ್ಡೆ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಸಾಮೂಹಿಕವಾಗಿ ಸೇವಿಸಿದರು.

ಅಸ್ಪಶ್ಯತೆಯಿಂದ ಮತಾಂತರ: ಭಟ್
ಅಸಮಾನತೆ ಹಾಗೂ ಅಸ್ಪೃಶ್ಯತೆಯಿಂದಾಗಿ ಹಿಂದೂ ಸಮಾಜದಲ್ಲಿ ಸಮಸ್ಯೆ ಗಳು ಹುಟ್ಟಿಕೊಂಡು ಕೊರಗ ಸಮುದಾಯ ಸೇರಿದಂತೆ ಅನೇಕ ಹಿಂದುಳಿದ ಸಮುದಾಯವರು ಇತರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದರಿಂದ ಹಿಂದೂ ಸಮಾಜಕ್ಕೆ ಬಹಳ ದೊಡ್ಡ ಹಾನಿಯಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಕೊರಗ ಸಮುದಾಯದ ಯುವಜನತೆಗೆ ಶಿಕ್ಷಣವನ್ನು ನೀಡಿ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವ ಮೂಲಕ ಸಮಾಜವನ್ನು ಆರ್ಥಿಕವಾಗಿ ಬಲಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡುವ ಅಗತ್ಯ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News