×
Ad

ನನ್ನ ಮನೆಗೆ ಬಂದ ಐಟಿ ಅಧಿಕಾರಿಗಳು ನೀನ್ಯಾಕೆ ಆರೆಸ್ಸೆಸ್‌ನಿಂದ ಹೊರ ಬಂದೆ ಎಂದು ಕೇಳಿದ್ದರು

Update: 2018-12-02 18:43 IST

#"ಬಜರಂಗದಳದ ನಾಯಕನೊಬ್ಬ ದನ ಕದ್ದು ಸಿಕ್ಕಿಬಿದ್ದರೆ ಆರೆಸ್ಸೆಸ್ ಮುಚ್ಚಿಡುತ್ತದೆ"

# "ಶರೀಫ್, ಆ್ಯಂಟನಿ ನುಂಗುವುದಕ್ಕಿಂತ ನಮ್ಮವ ನುಂಗಲಿ" ಎಂದು ಆರೆಸ್ಸೆಸ್ ನಾಯಕರು ಹೇಳಿದರು

ಮಂಗಳೂರು, ಡಿ.2: ಜಾಫರ್ ಶರೀಫ್, ಎ.ಕೆ.ಆ್ಯಂಟನಿಯಂಥವರು ನುಂಗುವ ಬದಲು ನಮ್ಮವ ನುಂಗಲಿ ಬಿಡಿ. ಅದೇನು ದೊಡ್ಡದಲ್ಲ...

‘ಅಭಿಮತ ಮಂಗಳೂರು’ ವತಿಯಿಂದ ನಗರದ ನಂತೂರಿನಲ್ಲಿರುವ ಶಾಂತಿ ಕಿರಣ ಸಭಾಂಗಣದಲ್ಲಿ ರವಿವಾರ ನಡೆದ ‘ಜನನುಡಿ 2018’ರ ‘ಹೊರಳುನೋಟ’ ಗೋಷ್ಠಿಯಲ್ಲಿ ಆರೆಸ್ಸೆಸ್ ನಿಂದ ಹೊರಬಂದು ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯರಾಗಿರುವ ನ್ಯಾಯವಾದಿಯೂ ಆಗಿರುವ ಸುಧೀರ್ ಮರೊಳ್ಳಿ ಹೇಳಿದ ಮಾತಿದು.

ಸಂಘ ಪರಿವಾರದ ಹಿನ್ನೆಲೆಯೇ ಇಲ್ಲದ ತನ್ನನ್ನು ಶಾಲಾ ಶಿಕ್ಷಕರು ಹೇಗೆ ಆರೆಸ್ಸೆಸ್ ಪ್ರವೇಶಿಸುವಂತೆ ಮತ್ತು ಮುಸ್ಲಿಂ ಹಾಗೂ ಕ್ರೈಸ್ತರನ್ನು ದ್ವೇಷಿಸುವಂತೆ ಮಾಡಿದರು ಎಂಬುದನ್ನು ವಿವರಿಸಿದ ಸುಧೀರ್ ಮರೊಳ್ಳಿ ‘ಮನಸ್ಸು ಮಾಡಿದರೆ ಅಲ್ಲಿನ ಹುಳುಕುಗಳ ವಿರುದ್ಧ ಧ್ವನಿ ಎತ್ತದೇ ಹೋಗಿದ್ದರೆ ನಾನಿಂದು ಸಂಸದ, ಶಾಸಕನೂ ಆಗುವ ಅವಕಾಶ ಸಿಗುತ್ತಿತ್ತು. ಆದರೆ, ಆತ್ಮಸಾಕ್ಷಿ ಒಪ್ಪದ ಕಾರಣ ನಾನು ಅಲ್ಲಿ ನಿಲ್ಲಲಾಗದೆ ಹೊರಬಂದೆ. ಹಾಗೆ ಹೊರ ಬಂದ ಬಳಿಕವೂ ನನ್ನನ್ನು ಸುಮ್ಮನೆ ಬಿಡಲಿಲ್ಲ. ನನ್ನ ಮೇಲೆ ದೈಹಿಕ ಹಲ್ಲೆಗೆ ಮುಂದಾದರು. ಮನೆಗೆ ಐಟಿ ದಾಳಿ ಮಾಡಿಸಿದರು. ಹಾಗೇ ಬಂದ ಐಟಿ ಅಧಿಕಾರಿಗಳು ಕೂಡಾ ನೀನ್ಯಾಕೆ ಆರೆಸ್ಸೆಸ್‌ನಿಂದ ಹೊರ ಬಂದೆ ಎಂದು ಕೇಳುತ್ತಾರೆ ಎಂದಾದರೆ ಈ ವ್ಯವಸ್ಥೆ ಎಷ್ಟು ಹದಗೆಟ್ಟಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು" ಎಂದರು.

ಬಿಜೆಪಿಯನ್ನು ಬೆಳೆಸಲು ಸಂಘವು ಏನನ್ನೂ ಮಾಡಲು ಹಿಂದೇಟು ಹಾಕುವುದಿಲ್ಲ. ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವರೊಬ್ಬರ ವಿರುದ್ಧ ಭ್ರಷ್ಟಾಚಾರದ ಹಗರಣ ಕೇಳಿ ಬಂದಾಗ ನಾವು ಇದನ್ನು ಪ್ರಶ್ನಿಸಿದೆವು. ಆವಾಗ ಆರೆಸ್ಸೆಸ್ ನಾಯಕರು "ಜಾಫರ್ ಶರೀಫ್, ಎ.ಕೆ.ಆ್ಯಂಟನಿ ನುಂಗುವುದಕ್ಕಿಂತ ನಮ್ಮವ ನುಂಗಲಿ ಬಿಡಿ" ಎಂದು ಲಘುವಾದರು. ಆದರ್ಶದ ಪವಿತ್ರ ಕೇಂದ್ರ ಸ್ಥಾನ ಎಂದು ನಂಬಿದ್ದ ಸಂಘಟನೆಯು ಭ್ರಷ್ಟಾಚಾರದ ಆಗರವಾಗಿರುವುದನ್ನು ತಿಳಿದು ಚಡಪಡಿಸಿದೆ ಎಂದು ಸುಧೀರ್ ಮರೊಳ್ಳಿ ಹೇಳಿದರು.

ಬಿಜೆಪಿಯನ್ನು ನಿಯಂತ್ರಿಸಲು ಆರೆಸ್ಸೆಸ್ ಎಬಿವಿಪಿಯ ವಿದ್ಯಾರ್ಥಿ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆಯಲ್ಲದೆ ಬಜರಂಗದಳ, ಹಿಂದೂ ಜಾಗರಣ ವೇದಿಕೆಯ ಮೂಲಕ ಗಲಾಟೆ ಎಬ್ಬಿಸಲು ಪ್ರೇರೇಪಿಸುತ್ತಿದೆ ಎಂದ ಸುಧೀರ್ ಮರೊಳ್ಳಿ ಆರೆಸ್ಸೆಸ್ ಎಲ್ಲಾ ರಂಗಗಳಲ್ಲೂ ತನ್ನ ವಿಭಾಗವನ್ನು ತೆರೆಯಲು ಯತ್ನಿಸುತ್ತಿವೆ. ಈಗಾಗಲೆ ಪೊಲೀಸ್, ನ್ಯಾಯಾಂಗದಲ್ಲೂ ತನ್ನ ಶಾಖೆಯನ್ನು ತೆರದಿದೆ. ಜಯಂತಿಗಳನ್ನು ಹೈಜಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುವ ಸಂಘಪರಿವಾರವು ಭವಿಷ್ಯದಲ್ಲಿ ಕುವೆಂಪು, ನೆಹರೂ ಅವರ ಜಯಂತಿ ಆಚರಿಸಿದರೆ ಅಚ್ಚರಿ ಇಲ್ಲ ಎಂದರು.

ಬಜರಂಗ ದಳದ ನಾಯಕನೊಬ್ಬ ದನಗಳನ್ನು ಕದ್ದು ಸಿಕ್ಕಿ ಬಿದ್ದರೂ ಅದನ್ನು ಮುಚ್ಚಿಟ್ಟ ಆರೆಸ್ಸೆಸ್ ಬೇರೆಯವರು ಮಾಡಿದರೆ ರಾಷ್ಟ್ರದ್ರೋಹ, ತಾವು ಮಾಡಿದರೆ ರಾಷ್ಟ್ರಪ್ರೇಮದ ಸಂಕೇತ ಎಂಬಂತೆ ಬಿಂಬಿಸಲು ಯತ್ನಿಸುತ್ತಾರೆ. ಇಂತಹ ಆರೆಸ್ಸೆಸ್‌ನೊಂದಿಗೆ ಬೀದಿ ಜಗಳ ಮಾಡುವ ಬದಲು ಸೈದ್ಧಾಂತಿಕ ಹೋರಾಟ ಮಾಡಬೇಕು ಎಂದು ಸುಧೀರ್ ಮರೊಳ್ಳಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News