ಕಂಬಳದಲ್ಲಿ ಕೋಣಗಳಿಗೆ ಹೊಡೆಯುವುದು ಬೇಡ : ಡಿ.ವಿ.ಸದಾನಂದ ಗೌಡ

Update: 2018-12-02 15:45 GMT

ಮೂಡುಬಿದಿರೆ,ಡಿ.2: ಕಂಬಳವು ಕರಾವಳಿಯ ಧಾರ್ಮಿಕ ಮತ್ತು  ಜನಪದ ಹಿನ್ನಲೆಯನ್ನು ಹೊಂದಿದ ಕ್ರೀಡೆಯಾಗಿದೆ. ಕೋಣಗಳಿಗೆ ಹೊಡೆಯುವುದು ಬೇಡ, ಬೆತ್ತ ತೋರಿಸಿದರೆ ತಪ್ಪಿಲ್ಲ ಎನ್ನುವುದು ನನ್ನ ಭಾವನೆ.  ಪ್ರಾಣಿದಯಾ ಸಂಘದವರು ಬೀದಿ ನಾಯಿಗಳ ಬಗ್ಗೆಯೂ ಗಮನಹರಿಸಬೇಕು. ಕಾನೂನು ಕೊಟ್ಟ ಆದೇಶ ಯಾವುದನ್ನು ನಾವು ಉಲ್ಲಂಘನೆ ಮಾಡುವುದಿಲ್ಲ. ಆದರೆ ನಮ್ಮ ಸಂಪ್ರದಾಯವನ್ನು ಉಳಿಸುವ ಕೆಲಸ ಮಾಡುತ್ತಿದೆ. ಕೋಣಗಳನ್ನು ಓಡಿಸುವಾಗ ಬೆತ್ತವನ್ನು ಹಿಡಿಯುವುದು ಅಪರಾಧವಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

ಇಲ್ಲಿನ ಕಡಲಕೆರೆಯಲ್ಲಿ ಕೋಟಿ-ಚೆನುಯ ಕಂಬಳ ಸಮಿತಿಯ ವತಿಯಿಂದ ನಡೆದ 16ನೇ ವರ್ಷದ ಕೋಟಿ ಚೆನ್ನಯ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಕಂಬಳ ಜಿಲ್ಲೆಯ ವಿಶೇಷತೆ. ಕಂಬಳದ ಕೋಣಗಳನ್ನು ಹಿಂಸೆಗಾಗಿ ಸಾಕುತ್ತಿಲ್ಲ ಪ್ರೀತಿಯಿಂದ ಸಾಕುತ್ತೇವೆ. ಜಲ್ಲಿಕಟ್ಟಿನಲ್ಲಿ ಕೋಣಗಳಿಗೆ ಹಿಂಸೆ ಮಾಡಿದಂತೆ ಕಂಬಳದಲ್ಲಿ ಮಾಡುತ್ತಿಲ್ಲ. ವಿಷಯ ಸುಪ್ರಿಂ ಕೋರ್ಟಿನಲ್ಲಿರುವುದರಿಂದ ಕಂಬಳಕ್ಕೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ವಕೀಲರು ವಾದವನ್ನು ಮಂಡಿಸಿ ಕಂಬಳವನ್ನು ಉಳಿಸಿಕೊಡುತ್ತಾರೆಂಬ ನಂಬಿಕೆಯಿದೆ ಎಂದರು. 

ಅನಿವಾಸಿ ಭಾರತೀಯ ಉದ್ಯಮಿ ರೋನಾಲ್ಡ್ ಕುಲಾಸೋ ಮಾತನಾಡಿ, ಮೂಡುಬಿದಿರೆಗೂ ಕುಲಾಸೋ ಕುಟುಂಬಕ್ಕೂ ಅನ್ಯೋನ್ಯವಾದ ಸಂಬಂಧವಿದೆ. ಕುಲಾಸೋ ಕುಟುಂಬಸ್ಥರು ಮೂಲತಃ ಮೂಡುಬಿದಿರೆಯವರು. ಇಂತಹ ಮೂಡುಬಿದಿರೆಯಲ್ಲಿ ಕಂಬಳದಂತಹ ಕ್ರೀಡೆ ನಡೆಯುತ್ತಿರುವುದು ಶ್ಲಾಘನೀಯ. .

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್‍ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು,  ಶಾಸಕರಾದ ಸುನೀಲ್ ಕುಮಾರ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಆಯನೂರು ಮಂಜುನಾಥ್, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿ.ಪಂ ಉಪಾಧ್ಯಕ್ಷೆ ಕಸ್ತೂರಿಪಂಜ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್, ಬಿಜೆಪಿ ವಿಭಾಗ ಪ್ರಭಾರಿ ಪ್ರತಾಪ್‍ಸಿಂಹ ನಾಯಕ್, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಮಹೇಶ್ ವಿಕ್ರಂ ಹೆಗ್ಡೆ, ಚಲನಚಿತ್ರ ನಟ ಬೋಜರಾಜ್ ವಾಮಂಜೂರು, ನಾಟಕ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಮತ್ತಿತರರು ಭಾಗವಹಿಸಿದ್ದರು.  

ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಸಮಿತಿಯ ಕೋಶಾಧಿಕಾರಿ ಭಾಸ್ಕರ್ ಎಸ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್ ಶೆಟ್ಟಿ, ಕೋಶಾಧಿಕಾರಿ ಸುರೆಶ್ ಕೆ.ಪೂಜಾರಿ ಉಪಸ್ಥಿತರಿದ್ದರು.

ಕಂಬಳಕ್ಕೆ ಆಧುನಿಕ ಸ್ಪರ್ಶ ನೀಡಿರುವ  ಮಿಜಾರು ಗುತ್ತು ಆನಂದ ಆಳ್ವ ಹಾಗೂ ಕಂಬಳದ ಓಟಗಾರರಾಗಿ 600ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿರುವ  ಯುವರಾಜ್ ಜೈನ್ ನಾರಾವಿ ಅವರನ್ನು ಸನ್ಮಾನಿಸಲಾಯಿತು. ಕಂಬಳಕ್ಕೆ ಪೂರಕವಾದ ಬೆಳಕು, ಧ್ವನಿವರ್ಧಕ, ಚಪ್ಪರ ವ್ಯವಸ್ಥೆ ಮಾಡುತ್ತಿರುವ ಆರ್.ಕೆ ಭಟ್, ಕಂಬಳ ಯಶಸ್ವಿಗೆ ಶ್ರಮಿಸಿದ ರಂಜಿತ್ ಪೂಜಾರಿ ಅವರನ್ನು ಗೌರವಿಸಲಾಯಿತು.

ಕಂಬಳದಲ್ಲಿ ವೀರರಾಣಿ ಅಬ್ಬಕ್ಕನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಕಂಬಳದ ವೇದಿಕೆಯಲ್ಲಿ ಕಂಬಳವನ್ನು ತುಳು ಲಿಪಿಯಲ್ಲಿ ಬರೆಯಲಾಗಿತ್ತು.

ಇತ್ತೀಚೆಗೆ ನಿಧನರಾದ ಅನಂತ ಕುಮಾರ್, ಅಂಬರೀಶ್, ಜಾಫರ್ ಶರೀಪ್ ಹಾಗೂ ಸುಖಾನಂದ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News