ರಾಮ ರಹೀಮರೆಲ್ಲ ಸೇರಿ ಪ್ರೀತಿಯಿಂದ ರಾಮಮಂದಿರ ನಿರ್ಮಿಸಲಿ: ಜನಾಗ್ರಹ ಸಭೆಯಲ್ಲಿ ಪರ್ಯಾಯ ಪಲಿಮಾರು ಸ್ವಾಮೀಜಿ

Update: 2018-12-02 15:55 GMT

ಉಡುಪಿ, ಡಿ.2: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ರಾಮ ರಹೀಂ ಎಲ್ಲರೂ ಸೇರಿ ಪ್ರೀತಿಯಿಂದ ನಿರ್ಮಿಸಬೇಕು. ನಾವು ಗಲಾಟೆ ಮಾಡದೆ ಅದರಲ್ಲಿ ಪ್ರೀತಿಯನ್ನು ಸೇರಿಸಬೇಕಾಗಿದೆ ಎಂದು ಉಡುಪಿ ಪಯಾರ್ಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಹಮ್ಮಿಕೊಳ್ಳಲಾದ ಜನಾಗ್ರಹ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಇಂದು ದೇಶದಲ್ಲಿ ರಾಮ ಮಂದಿರ ವಿರೋಧಿ ಪಕ್ಷವನ್ನು ನಿರ್ಣಾಮ ಗೊಳಿಸುವ ರಾಮ ಸೇನೆಯ ಚಂಡಮಾರುತ ಬೀಸುತ್ತಿದೆ. ಇದನ್ನು ಯಾರು ಕೂಡ ಎದುರಿಸಲು ಸಾಧ್ಯವಿಲ್ಲ. ಇದಕ್ಕೆ ಶರಣಾಗತರಾಗಬೇಕೆ ಹೊರತು ವಿರೋಧಿಸುವಂತೆ ಇಲ್ಲ. ನಾವು ಚೀನಾ, ಪಾಕಿಸ್ತಾನ ದೇಶದಲ್ಲಿ ರಾಮ ಮಂದಿರ ನಿರ್ಮಿಸಿ ಕೊಡಿ ಎಂದು ಕೇಳುತ್ತಿಲ್ಲ ಎಂದರು.

ರಾಮ ಮಂದಿರ ನಿರ್ಮಿಸಿ ಕೊಡಿ ಎಂದು ಕೇಳುವುದು ಭಿಕ್ಷೆಯಲ್ಲ. ಈ ಪ್ರಜಾಪ್ರಭುತ್ವ ದೇಶದಲ್ಲಿ ನಾವೇ ಪ್ರಭುಗಳು. ಹಾಗಾಗಿ ನಮ್ಮ ಆಗ್ರಹಕ್ಕೆ ಮನ್ನಣೆ ನೀಡಬೇಕು. ರಾಮ ಮಂದಿರ ನಿರ್ಮಾಣ ಕಾರ್ಯ ಖಂಡಿತ ಆಗಬೇಕು. ನ್ಯಾಯಾಲಯವೂ ನಮಗೆ ನ್ಯಾಯ ಕೊಡದಿದ್ದಾಗ ನಮಗೆ ಇರುವ ಒಂದೇ ಒಂದು ದಾರಿ ಸಂಸತ್. ಹಾಗಾಗಿ ನಮ್ಮ ಧ್ವನಿ ಸಂಸತ್‌ಗೆ ಕೇಳಬೇಕು ಎಂದು ಅವರು ತಿಳಿಸಿದರು.

ವಿಶ್ವ ಹಿಂದು ಪರಿಷತ್ ಅಖಿಲ ಭಾರತ ಸಹಕಾರ್ಯದರ್ಶಿ ರಾಘವಲು ದಿಕ್ಸೂಚಿ ಭಾಷಣ ಮಾಡಿ, ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ರಾಮ ಮಂದಿರ ನಿರ್ಮಿಸುವ ಬಗ್ಗೆ ಮಸೂದೆ ಮಂಡನೆಯಾಗಬೇಕು. ಈ ನಿಟ್ಟಿನಲ್ಲಿ ರಾಮ ಭಕ್ತರು ತಮ್ಮ ಕ್ಷೇತ್ರದ ಎಲ್ಲ ಪಕ್ಷಗಳ ಸಂಸದರ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಹೇಳಿದರು.

ಆನೆಗುಂದಿ ಮಹಾ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಬಾಳೆಕುದ್ರು ಮಠದ ಶ್ರೀನೃರಸಿಂಹಾಶ್ರಮ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ಸ್ವಾಮೀಜಿ, ವಿಎಚ್‌ಪಿ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ, ಪ್ರಮುಖರಾದ ಪ್ರೊ.ಎಂ.ಬಿ.ಪುರಾಣಿಕ್, ಸುನೀಲ್ ಕೆ.ಆರ್., ಪ್ರೇಮಾನಂದ ಶೆಟ್ಟಿ, ಶರಣ್ ಪಂಪ್‌ವೆಲ್, ಭುಜಂಗ ಕುಲಾಲ್, ದಿನೇಶ್ ಮೆಂಡನ್, ಯೋಗೀಶ್ ನಾಯಕ್, ಪ್ರಮೋದ್ ಮಂದಾರ್ತಿ, ರಮಾ ಜೆ.ರಾವ್ಮೊದಲಾದವರು ಉಪಸ್ಥಿತರಿದ್ದರು.

ರಾಮ ಮಂದಿರ ನಿರ್ಮಾಣಕ್ಕೆ ಮಸೂದೆ ಮಂಡಿಸುವಂತೆ ಒತ್ತಾಯಿಸುವ ಮನವಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಜೋಡುಕಟ್ಟೆಯಿಂದ ರಾಜಾಂಗಣ ಪಾರ್ಕಿಂಗ್ ಪ್ರದೇಶ ವರೆಗೆ ಶೋಭಯಾತ್ರೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News