ಗೌರಿ ಹತ್ಯೆ ಸೂತ್ರದಾರಿ ಯಾರು ಎನ್ನುವುದು ಸದ್ಯದಲ್ಲಿಯೇ ತಿಳಿಯಲಿದೆ : ದಿನೇಶ್ ಅಮೀನ್ ಮಟ್ಟು

Update: 2018-12-02 16:50 GMT

ಮಂಗಳೂರು, ಡಿ.2: ಮಹಾತ್ಮ ಗಾಂಧಿ ಹತ್ಯೆಯ ತನಿಖೆಯ ನಂತರ ಬದ್ಧತೆಯಿಂದ ನಡೆದ ತನಿಖೆಯೇ ಗೌರಿ ಲಂಕೇಶ್ ಹತ್ಯಾ ತನಿಖೆಯಾಗಿದೆ. ಈ ತನಿಖೆಯು ಹತ್ಯೆಯ ಹಿಂದಿನ ಸೂತ್ರದಾರರ ಕಡೆಗೆ ಬೆರಳನ್ನು ತೋರಿಸುತ್ತಿದೆ. ಮುಂದಿನ ದಿನಗಳಲ್ಲಿ ಹತ್ಯೆಯ ಸೂತ್ರದಾರಿ ಯಾರು ಎನ್ನುವುದು ಗೊತ್ತಾಗಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದರು.

ನಗರದ ನಂತೂರು ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಮಂಗಳೂರು ವತಿಯಿಂದ ರವಿವಾರ ಹಮ್ಮಿಕೊಳ್ಳಲಾದ ಜನನುಡಿ 5ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗೌರಿ ಹತ್ಯೆ ನಡೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಹೋರಾಟವನ್ನು ಆಯೋಜಿಸಲಾಗಿತ್ತು. ಆ ಹೋರಾಟದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಕೂಡಿದ್ದರು. ಆ ಹೋರಾಟಕ್ಕೆ ಫಲ ನೀಡಿದಂತಾಗಿದೆ. ಈ ಮೂಲಕ ತನಿಖೆ ತಾರ್ಕಿಕ ಅಂತ್ಯವನ್ನು ಕಂಡಿದೆ ಎಂದು ಹೇಳಿದರು.

ಇಂದಿನ ಯುವ ಜನಾಂಗದಲ್ಲಿ ಓದಿನ, ಅಧ್ಯಯನದ ಕೊರತೆ ಮುಖಕ್ಕೆ ರಾಚುತ್ತಿದೆ. ಹೋರಾಟದ ಶಿಸ್ತು, ಗುಣಗಳನ್ನು ಅಳವಡಿಸಿಕೊಳ್ಳಬೇಕಾದರೆ ಸಾಕಷ್ಟು ಓದಿಕೊಳ್ಳಬೇಕು. ಕೇವಲ ಭಾಷಣಗಳನ್ನು ಆಲಿಸುವುದರಿಂದ ಬರುವುದಿಲ್ಲ. ಬದಲಾಗಿ ಆಮೂಲಾಗ್ರವಾಗಿ ಪುಸ್ತಕಗಳ ಅಧ್ಯಯನ ಮಾಡಬೇಕು. ಸಾಹಿತ್ಯ ಸಮಾವೇಶಗಳಿಗೆ ಹೋಗಬೇಕು. ಅಲ್ಲಿನ ಪುಸ್ತಕಗಳನ್ನು ಖರೀದಿಸಿ ಓದಬೇಕು ಎಂದು ಹೇಳಿದರು.

‘ನುಡಿಸಿರಿ’ ಎಂದು ಹೆಸರಿಟ್ಟು ಸಾಹಿತ್ಯ ಸಮಾರಂಭಗಳನ್ನು ಆಯೋಜಿಸಿ ಸಾಧಿಸಿದ್ದು ಏನೂ ಇಲ್ಲ. ಸಾಧಿಸಿದ್ದೇ ಆದಲ್ಲಿ ಆ ಕಾಲೇಜಿನಲ್ಲಿ ಆತ್ಮಹತ್ಯೆಗಲು ನಡೆಯುತ್ತಿರಲಿಲ್ಲ. ಬದಲಾಗಿ ಆತ್ಮಹತ್ಯೆಗಳು ಹೆಚ್ಚುತ್ತಿವೆ. ನುಡಿಸಿರಿಯಿಂದಾಗಿ ಆತ್ಮಹತ್ಯೆಗಳು ನಿಲ್ಲುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಪ್ರಗತಿಪರರು ಎನಿಸಿಕೊಂಡವರು ನುಡಿಸಿರಿಯಲ್ಲಿ ಹೋಗಿ ತಮ್ಮ ಕಂಠ ಶೋಷಣೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಮೂಲ ಮನಸ್ಥಿತಿಯನ್ನು ಬದಲಾಯಿಸಲಸಾಧ್ಯ. ಅವರ ಬದ್ಧತೆಯಲ್ಲೇ ದೋಷವಿದೆ. ಮೊದಲು ಅವರ ತತ್ವ, ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕು. ನಮ್ಮದು ಸಂವಿಧಾನ ಬದ್ಧ ವಿಚಾರವಾಗಿದೆ. ಸಂವಿಧಾನವು ಸಮಾನತೆ, ಸಹೋದರತೆ, ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.

ಮೋದಿ ಅವರ ಹೆಸರನ್ನು ಬದಲಾಯಿಸಿ ಮಹಾತ್ಮಾ ಗಾಂಧಿ ಎಂದು ಮರು ನಾಮಕರಣ ಮಾಡಿದರೆ ಮೋದಿ ಗಾಂಧಿಯಾಗುವುದಿಲ್ಲ. ದೇಶದಲ್ಲಿನ ಪ್ರಬಲ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ದುರ್ಬಲ ಶಕ್ತಿಗಳು ಒಂದಾಗುವ ಸಮಯ ಈಗ ಬಂದಿದೆ. ಕೇವಲ ಶೇ.31ರಷ್ಟು ಮತಗಳನ್ನು ಪಡೆದು ಅಧಿಕಾರವನ್ನು ಹಿಡಿದಿದೆ. ಶೇ.69ರಷ್ಟು ಮತಗಳನ್ನು ಉಳಿದ ಪಕ್ಷಗಳು ಪಡೆದರೂ ಅಧಿಕಾರ ಪಡೆಯಲಾಗಲಿಲ್ಲ. ಇದಕ್ಕೆ ಒಗ್ಗಟ್ಟು ಇಲ್ಲದಿರುವುದೇ ಕಾರಣ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕವಾಗಿ ಬೆಳೆಯಬೇಕು. ಅದರಂತೆ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಧೇಯೋದ್ದೇಶ ಇಟ್ಟುಕೊಂಡು ಬೆಳೆಯಬೇಕು. ಆಗ ಮಾತ್ರ ದೇಶದಲ್ಲಿನ ಅಘೋಷಿತ ಪರಿಸ್ಥಿತಿಯನ್ನು ತೆಗೆದುಹಾಕಬಹುದಾಗಿದೆ. ಚುನಾವಣೆ ಗೆಲ್ಲಲೆಂದೇ ಕೆಲವರು ಶಬರಿಮಲೆ ತೀರ್ಪನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆಡಳಿತದಲ್ಲಿ ದಿವಾಳಿಯಾಗಿರುವ ಕೇಂದ್ರ ಸರಕಾರ ಸಾಧನೆಗಳನ್ನು ಹೇಳಿ ಮತ ಪಡೆಯುವ ಬದಲು ದುಷ್ಟ ತಂತ್ರಗಳಿಂದ ರಾಜಕೀಯ ಲಾಭ ಪಡೆಯಲು ಹಾತೊರೆಯುತ್ತಿದೆ ಎಂದರು.

ದೇಶದಲ್ಲಿ ಬೈರಪ್ಪ ಒಬ್ಬರೆ ಪ್ರೊಫೆಸ್ಸರ್ ಇದ್ದಂತೆ ಬಿಂಬಿಸಲಾಗುತ್ತಿದೆ. ಕಳೆದ ಐದು ವರ್ಷಗಳ ‘ಜನನುಡಿ’ಯ ಲಿಸ್ಟ್‌ನ್ನು ಅವಲೋಕಿಸಿದರೆ ಅಂತಹ ನೂರಾರು ಚಿಂತಕರು ನಮ್ಮಲ್ಲಿ ಇದ್ದಾರೆ. ಅವರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಸಂವಾದ ನಡೆಸುವವರು ಜನನುಡಿಯಲ್ಲಿ ಸಿಗುತ್ತಾರೆ ಎಂದು ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಪ್ರೊ.ವಲೇರಿಯನ್ ರೊಡ್ರಿಗಸ್, ಹೋರಾಟಗಾರ್ತಿ ಎಸ್.ವರಲಕ್ಷ್ಮೀ ಉಪಸ್ಥಿತರಿದ್ದರು. ಇತ್ರಾ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News