ಮಂಗಳೂರಿನ ವೆಸ್ಟ್‌ಲೈನ್ ಗ್ರೂಪ್ ನ ನಾಸಿರ್ ಮೊಹಿದಿನ್‌ಗೆ 'ಐಇಡಿಆರ್‌ಎ ಅತ್ಯುತ್ತಮ ಸಾಧನೆ' ಪ್ರಶಸ್ತಿ

Update: 2018-12-03 03:36 GMT

ಹೊಸದಿಲ್ಲಿ, ಡಿ.3: ಮಂಗಳೂರಿನ ಖ್ಯಾತ ಬಿಲ್ಡರ್ ವೆಸ್ಟ್‌ಲೈನ್ ಗ್ರೂಪ್‌ನ ಆಡಳಿತ ನಿರ್ದೇಶಕ ನಾಸಿರ್ ಮೊಹಿದಿನ್‌ ಅವರು ಹೊಸದಿಲ್ಲಿಯ ಇಂಡಿಯನ್ ಇಕಾನಮಿಕ್ ಡೆವಲಪ್ಮೆಂಟ್ ಆ್ಯಂಡ್ ರಿಸರ್ಚ್ ಅಸೋಸಿಯೇಶನ್ (ಐಇಡಿಆರ್‌ಎ) ಕಟ್ಟಡ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ನೀಡುವ ಅತ್ಯುತ್ತಮ  ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಹೊಸದಿಲ್ಲಿಯ ಇಂಡಿಯಾ ಹ್ಯಾಬಿಟಾಟ್ ನಲ್ಲಿ  ಇತ್ತೀಚಿಗೆ ಆಯೋಜಿಸಿದ್ದ ‘ಭಾರತೀಯ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಹೊಣೆಗಾರಿಕೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೇಂದ್ರದ ಮಾಜಿ ಗೃಹಸಚಿವ ಹಾಗೂ ರಕ್ಷಣಾ ಸಚಿವ ಶಿವರಾಜ್ ಪಾಟಿಲ್ ಅವರಿಂದ  ನಾಸಿರ್ ಮೊಹಿದಿನ್‌ ಈ ಪ್ರಶಸ್ತಿ ಸ್ವೀಕರಿಸಿದರು. 

ಕೈಗಾರಿಕೆ ಹಾಗೂ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಗೌರವಿಸಲು ಹಾಗೂ ಪ್ರಶಂಸಿಸಲು ಭಾರತದ ಮಧ್ಯಮ ಹಾಗೂ ಸಣ್ಣ ಉದ್ಯಮಿಗಳಲ್ಲಿ ಅನನ್ಯ ಸಾಧನೆ ಮಾಡಿದ 80 ಮಂದಿಯನ್ನು ಇಂಡಿಯನ್ ಇಕಾನಮಿಕ್ ಡೆವಲಪ್‌ಮೆಂಟ್ ಆ್ಯಂಡ್ ರಿಸರ್ಚ್ ಅಸೋಸಿಯೇಶನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

 ಕಾರ್ಯಕ್ರಮದಲ್ಲಿ ಮಾತನಾಡಿದ  ನಾಸಿರ್ ಮೊಹಿದಿನ್‌, ಕಳೆದ 7 ವರ್ಷಗಳಿಂದ ನಾವು ವ್ಯಯಿಸಿದ ಶ್ರಮವನ್ನು ಗುರುತಿಸಿರುವುದು ನಿಜವಾಗಲೂ ಸಂತಸ ತಂದಿದೆ. ನಮ್ಮ ಪ್ರಮುಖ ಯೋಜನೆ ವೆಸ್ಟ್‌ಲೈನ್ ಸಿಗ್ನೇಚರ್ ಅನ್ನು ಉದ್ಯಮ ಕ್ಷೇತ್ರ ನಿಧಾನವಾಗಿ ಗುರುತಿಸಿದೆ ಹಾಗೂ ಪ್ರಶಂಸಿಸಿದೆ. ಮಾರ್ಚ್ 2019ರಲ್ಲಿ ಮುಂಬೈಯಲ್ಲಿ ಆಯೋಜಿಸಿರುವ  ಅತಿ ಎತ್ತರದ ಕಟ್ಟಡಗಳ ಉನ್ನತ ಮಟ್ಟದ ಶೃಂಗಸಭೆಯಲ್ಲಿ ವಿಷಯ ಮಂಡಿಸಲು  ಕೂಡ  ನಮಗೆ ಅಹ್ವಾನ ಬಂದಿದೆ. ಇಂತಹ ಪ್ರೋತ್ಸಾಹದಾಯಕ ಬೆಳವಣಿಗೆಗಳು ನಮಗೆ ನಿರ್ಮಾಣ ಕ್ಷೇತ್ರದ ಆಧುನಿಕ ನೂತನ ತಂತ್ರಜ್ಞಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ, ಸೃಜನಶೀಲವಾಗಿ ಬಳಸಿಕೊಂಡು ಜನರಿಗೆ ಅತ್ಯುತ್ತಮ ಸೇವೆ ನೀಡಲು ಇನ್ನಷ್ಟು ಹುರುಪು ತುಂಬುತ್ತದೆ. ನಾವು ಕ್ರಮಿಸಲಿರುವ ಹಾದಿ ಇನ್ನೂ ದೀರ್ಘವಿದ್ದು ಅದನ್ನು ಸಾಧಿಸುವ ಛಲ ನಮ್ಮಲ್ಲಿದೆ ಎಂದರು.

ಮಂಗಳೂರಿನ ನಂತೂರಿನಲ್ಲಿ ನಿರ್ಮಾಣವಾಗುತ್ತಿರುವ ಅತ್ಯಂತ ಎತ್ತರದ ಹಾಗೂ ಆಕರ್ಷಕ ವಿನ್ಯಾಸದ ವಿಲಾಸಿ ವಸತಿ ಸಮುಚ್ಚಯ 'ವೆಸ್ಟ್ ಲೈನ್ ಸಿಗ್ನೇಚರ್' ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಅದರ ನಿರ್ಮಾಣದ ಹೊಣೆಯನ್ನು ಎಂ ಫಾರ್ ನಿರ್ಮಾಣ ಸಂಸ್ಥೆ ಹೊತ್ತಿದೆ. ದೇಶ ವಿದೇಶಗಳ ಆರ್ಕಿಟೆಕ್ಟ್ ಗಳು ಹಾಗೂ ತಂತ್ರಜ್ಞರು ಈ ಯೋಜನೆಯ ತಂಡದಲ್ಲಿದ್ದು ಯೋಜನೆ ಕುರಿತು ಭಾರೀ ನಿರೀಕ್ಷೆ ಮೂಡಿಸಿದೆ.  ಮಂಗಳೂರಿನಂತಹ ಎರಡನೇ ಹಂತದ ವಾಣಿಜ್ಯ ನಗರಗಳಲ್ಲಿ ಅತ್ಯಂತ ಎತ್ತರದ ಕಟ್ಟಡ ನಿರ್ಮಾಣ ಮಾಡುವಲ್ಲಿ ಅಳವಡಿಸಿರುವ ವಿನೂತನ ತಂತ್ರಜ್ಞಾನಕ್ಕಾಗಿ ಕನ್ಸ್ಟ್ರಕ್ಷನ್ ಬಿಸಿನೆಸ್ ಟುಡೇ ಹಾಗೂ ಸಿಇಒ ಇನ್ಸೈಟ್ ಮ್ಯಾಗಝಿನ್ ಗಳಲ್ಲಿ 'ವೆಸ್ಟ್ ಲೈನ್ ಗ್ರೂಪ್' ಅನ್ನು ಗುರುತಿಸಿ ಪ್ರಶಂಸಿಸಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಮಾಜಿ ಸಚಿವ ಮಣಿಶಂಕರ್ ಅಯ್ಯರ್, ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಜಮ್ಮು-ಕಾಶ್ಮೀರದ ರಾಜ್ಯ ಉತ್ತರದಾಯಿತ್ವ ಆಯೋಗದ ಅಧ್ಯಕ್ಷ ಜಸ್ಟಿಸ್ ಬಶೀರ್ ಅಹ್ಮದ್ ಖಾನ್, ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಇಕ್ಬಾಲ್ ಸಿಂಗ್ ಹಾಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಜಯ್ ಸಿಂಗ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News