ದೇವರುಗಳನ್ನು ಜಾತಿಯ ಆಧಾರದಲ್ಲಿ ವಿಂಗಡಿಸಬೇಡಿ: ಆದಿತ್ಯನಾಥ್ ವಿರುದ್ಧ ಉ.ಪ್ರದೇಶ ಸಚಿವರ ಆಕ್ರೋಶ

Update: 2018-12-03 10:35 GMT

ಲಕ್ನೋ, ಡಿ.3: ಹನುಮಾನ್ ಒಬ್ಬ ದಲಿತನಾಗಿದ್ದ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಾಜಸ್ಥಾನದ ಆಲ್ವಾರ್ ಎಂಬಲ್ಲಿ ಕಳೆದ ವಾರ ತಮ್ಮ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಹೇಳಿರುವುದನ್ನು ಉತ್ತರ ಪ್ರದೇಶದ ರಾಜ್ಯ ಸಚಿವ ಓಂ ಪ್ರಕಾಶ್ ರಾಜಭರ್ ಟೀಕಿಸಿದ್ದಾರೆ. ದೇವರುಗಳನ್ನು ಜಾತಿಯ ಆಧಾರದಲ್ಲಿ ವಿಂಗಡಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿರುವ ರಾಜಭರ್ ಶಾಮ್ಲಿ ಜಿಲ್ಲೆಯಲ್ಲಿ ರವಿವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ, ಮುಖ್ಯಮಂತ್ರಿಯ ಈ ಹೇಳಿಕೆಯಿಂದಾಗಿ ಇದೀಗ ದಲಿತ ಸಮುದಾಯವು ಎಲ್ಲಾ ಹನುಮಾನ್ ದೇವಳಗಳ ಉಸ್ತುವಾರಿಯನ್ನು ತನಗೆ ನೀಡುವಂತೆ ಆಗ್ರಹಿಸಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕಷ್ಯಪ ಸಮುದಾಯಕ್ಕೆ ಶೇ 27ರಷ್ಟು ಮೀಸಲಾತಿ ನೀಡದೇ ಇರುವ ಬಗ್ಗೆಯೂ ರಾಜಭರ್ ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ. ಆದಿತ್ಯನಾಥ್ ಅವರ ದಲಿತ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್, ಎಲ್ಲಾ ಹನುಮಾನ್ ದೇವಳಗಳನ್ನು ದಲಿತರಿಗೆ ವಹಿಸಿ ಅಲ್ಲಿನ ಅರ್ಚಕರನ್ನಾಗಿ ದಲಿತರನ್ನು ನೇಮಿಸಬೇಕೆಂದು ಆಗ್ರಹಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News