ಮೋದಿ ಸರಕಾರದ ಯೋಜನೆಗಳು ವಿಫಲ ಎಂದ ಪಕ್ಷದ ಆಂತರಿಕ ಸಮೀಕ್ಷೆ: ವರದಿ

Update: 2018-12-03 11:05 GMT

ಹೊಸದಿಲ್ಲಿ, ಡಿ.3: ಮುಂದಿನ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆಯೆನ್ನುವಾಗ ‘ಬ್ರ್ಯಾಂಡ್ ಮೋದಿ’ ಬಲವರ್ಧನೆಗೊಂಡಂತೆ ಕಂಡರೂ ಪಕ್ಷ ಹಾಗೂ ಸರಕಾರದ ಹಲವಾರು ಯೋಜನೆಗಳು ಅದಕ್ಕೆ ತಕ್ಕಂತೆ ಜನಪ್ರಿಯತೆ ಪಡೆದಿಲ್ಲ ಎಂದು ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆ ಕಂಡುಕೊಂಡಿದೆ ಎಂದು newindianexpress.com ವರದಿ ಮಾಡಿದೆ.

ಸುಮಾರು 34,000 ಮಂದಿಯನ್ನೊಳಗೊಂಡ ಈ ನಾಲ್ಕು ತಿಂಗಳ ಅವಧಿಯ ಸಮೀಕ್ಷೆಯಿಂದ ಕಂಡುಕೊಂಡಂತೆ ಶೇ 63ರಷ್ಟು ಜನರು ಪ್ರಧಾನಿ ಮೋದಿ ಮುಂದಿನ ವರ್ಷವೂ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಬಯಸಿದ್ದಾರೆ. 2014ರಲ್ಲಿ ನಡೆಸಲಾದ ಇಂತಹುದೇ ಸಮೀಕ್ಷೆಯಲ್ಲಿ ಶೇ.59ರಷ್ಟು ಮಂದಿ ಮೋದಿ ಪ್ರಧಾನಿಯಾಗಬೇಕೆಂದು ಇಚ್ಛಿಸಿದ್ದರು.

ಈ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಶೇ 50ರಷ್ಟು ಜನರ ಬೆಂಬಲವಿದೆಯೆಂದು ತಿಳಿದು ಬಂದಿದ್ದು ಅಮಿತ್ ಶಾ ನಿಗದಿ ಪಡಿಸಿದ ಗುರಿಗಿಂತ (ಶೇ.37) ಇದು ಬಹಳಷ್ಟು ಹೆಚ್ಚಾಗಿದೆ.

ಮನ್ ಕಿ ಬಾತ್ ಹಾಗೂ ಸರಕಾರಿ ಸವಲತ್ತುಗಳ ಫಲಾನುಭವಿಗಳೊಂದಿಗೆ ಸಂವಾದ ಪ್ರಧಾನಿಯ ಜನಪ್ರಿಯತೆಯನ್ನು ಬಿಜೆಪಿಗಿಂತಲೂ ಹೆಚ್ಚಿಸುವಲ್ಲ ಸಫಲವಾಗಿದೆ ಎಂದು ಸಮೀಕ್ಷೆ ನಡೆಸಿದ ಬಿಜೆಪಿ ಸಹ ಸಂಘಟನೆಯ ಮುಖ್ಯಸ್ಥರು ಹೇಳಿದ್ದಾರೆ. ಅಮಾನ್ಯೀಕರಣ ಹಾಗೂ ಜಿಎಸ್ಟಿ ಉತ್ತಮ ಯೋಜನೆಯಲ್ಲ ಎಂದು ಶೇ 48ರಷ್ಟು ಮಂದಿ ಹೇಳಿದರೆ ಅದು ಉತ್ತಮ ಕ್ರಮ ಎಂದು ಶೇ 29ರಷ್ಟು ಮಂದಿ ಹೇಳಿದ್ದಾರೆ. ಸರಕಾರದ ಜೀವನ್ ಬಿಮಾ ಜ್ಯೋತಿ ಯೋಜನೆಗೆ ಶೇ.45ರಷ್ಟು ಮಂದಿ ಹಾಗೂ ಉಜ್ವಲ ಯೋಜನೆಗೆ ಶೇ 53ರಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚುತ್ತಿದೆ ಎಂಬ ಆಧಾರದಲ್ಲಿ ಶೇ 65ರಷ್ಟು ಮಂದಿ ಮೋದಿಯ ಯೋಜನೆಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಪ್ರಧಾನಿಯ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಯಂಗವಾಗಿ ತ್ಯಾಜ್ಯ ಸಂಗ್ರಹ ಕ್ಷೇತ್ರದ  ಕಾರ್ಯನಿರ್ವಹಣೆಗೆ ಸಮೀಕ್ಷೆಯಲ್ಲಿ ಭಾಗವಹಿಸಿದ ಹೆಚ್ಚಿನವರಿಗೆ ಸಮಾಧಾನ ತಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News