ವಿಕಲಚೇತನರ ಸಬಲೀಕರಣಕ್ಕೆ ಒತ್ತು: ಮೇಯರ್ ಭಾಸ್ಕರ್

Update: 2018-12-03 11:07 GMT

ಮಂಗಳೂರು, ಡಿ.3: ಸರಕಾರದ ವಿವಿಧ ಯೋಜನೆಗಳನ್ನು ಸಕಾಲಕ್ಕೆ ತಲುಪಿಸುವ ಮೂಲಕ ವಿಕಲಚೇತನರ ಸಬಲೀಕರಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ಒತ್ತು ನೀಡುತ್ತಿದೆ ಎಂದು ಮೇಯರ್ ಭಾಸ್ಕರ್ ಕೆ. ಹೇಳಿದ್ದಾರೆ. 

ವಿಕಲಚೇತನರ ದಿನಾಚರಣೆ ಪ್ರಯುಕ್ತ ಇಂದು ಮನಪಾ ಸಭಾಂಗಣದಲ್ಲಿ ಇಂದು ಶೇ. 3ರ ಮೀಸಲು ನಿಧಿಯಡಿ ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

2018-19ನೆ ಸಾಲಿನಲ್ಲಿ ವಿಕಲಚೇತನರಿಗೆ ವೈಯಕ್ತಿಕ ಸೌಲಭ್ಯಗಳಿಗಾಗಿ 53.30 ಲಕ್ಷ ರೂ. ಕಾದಿರಿಸಲಾಗಿದ್ದು, ನವೆಂಬರ್ 2018ರವರೆಗೆ 7.42 ಲಕ್ಷ ರೂ.ಗಳನ್ನು ಬಳಕೆ ಮಾಡಿರುವುದಾಗಿ ಹೇಳಿದರು.

ವಿಕಲ ಚೇತನ ಫಲಾನುಭವಿಗಳಿಗೆ ಕೃತಕ ಕಾಲು, ಶ್ರವಣ ಸಾಧನ, ವೀಲ್ ಚೇರ್ ಜತೆಗೆ ವೈದ್ಯಕೀಯ ವೆಚ್ಚ, ಶಸ್ತ್ರಚಿಕಿತ್ಸೆ, ಶೌಚಾಲಯ ನಿಮಾರ್ರ್ಣ, ನೀರಿನ ಸಂಪರ್ಕ, ಅಡುಗೆ ಅನಿಲ ಸಂಪರ್ಕ, ಪಕ್ಕಾ ಮನೆ ನಿರ್ಮಾಣ, ಮನೆ ದುರಸ್ತಿ, ಸ್ವಯಂ ಉದ್ಯೋಗ ಮೊದಲಾದವುಗಳಿಗೆ ಸಹಾಯಧನವನ್ನು ವಿತರಿಸಲಾಯಿತು.

ಉಪ ಮೇಯರ್ ಮುಹಮ್ಮದ್ ಕೆ. ಮಾತನಾಡಿ, ವಿಕಲಚೇತನರನ್ನು ಪೋಷಕರು ಎಂದೂ ಶಾಪವಾಗಿ ಪರಿಗಣಿಸದೆ, ಅವರಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿಸೋಜ ಮಾತನಾಡಿ, ವಿಕಲಚೇತನರಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಳಂಬ ಮಾಡದೆ, ಬಾಕಿ ಇರಿಸದೆ ತಕ್ಷಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸದಸ್ಯರಾದ ಸಬಿತಾ ಮಿಸ್ಕಿತ್, ಅಖಿಲಾ ಆಳ್ವ, ಪ್ರಕಾಶ್ ಸಾಲ್ಯಾನ್, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

ಉಪ ಆಯುಕ್ತ ಗೋಕುಲ್‌ದಾಸ್ ನಾಯಕ್ ಸ್ವಾಗತಿಸಿದರು. ಸಮುದಾಯ ಕಲ್ಯಾಣ ಅಧಿಕಾರಿ ಮಾಲಿನಿ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News