ಪೋಕ್ಸೊ ಪ್ರಕರಣ: ಆರೋಪಿ ಪತ್ರಕರ್ತನಿಗೆ ನ್ಯಾಯಾಂಗ ಬಂಧನ

Update: 2018-12-03 11:20 GMT

ಉಡುಪಿ, ಡಿ.3: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿ ಕುಂದಾಪುರದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ(40)ಗೆ ಉಡುಪಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ನ.29ರಿಂದ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯ ವಿಚಾರಣೆ ಪೂರ್ಣಗೊಂಡ ಹಾಗೂ ಪೊಲೀಸ್ ಕಸ್ಟಡಿ ಅವಧಿ ಡಿ.2ಕ್ಕೆ ಮುಗಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗಾ ಇಂದು ಉಡುಪಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಆರೋಪಿಯನ್ನು ಡಿ.17 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಬಳಿಕ ಆರೋಪಿ ಯನ್ನು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕೊಂಡೊಯ್ಯಲಾಯಿತು.

ಶಾಲಾ ವಿದ್ಯಾರ್ಥಿಗಳನ್ನು ಹಾಡಿಗೆ ಕರೆದೊಯ್ಯದ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ 21 ಬಾಲಕರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ 16, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕುಂದಾಪುರ ಗ್ರಾಮಾಂತರ ಮತ್ತು ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ಪೋಕ್ಸೊ ಕಾಯಿದೆಯಡಿ ದಾಖಲಾಗಿವೆ. ಆರೋಪಿ ವಿರುದ್ಧ ಇನ್ನಷ್ಟು ಮಕ್ಕಳು ದೂರು ಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಹಾಡುಗಾರನಾಗಿದ್ದ ಚಂದ್ರ ಹೆಮ್ಮಾಡಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಿ, ಅದರ ಸುದ್ದಿಗಳನ್ನು ಮತ್ತು ಊರಿನ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದ್ದನು. ಪತ್ರಕರ್ತನ ಸೋಗಿನಲ್ಲಿ ಹೋಗಿ ಸುದ್ದಿಯ ಜಾಗ ತೋರಿಸುವಂತೆ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ಕಾಡಿನಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮಕ್ಕಳಿಗೆ ಚಾಕು ತೋರಿಸಿ ಕೊಲೆ ಮಾಡುವ ಬೆದರಿಕೆ ಹಾಕುತ್ತಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.


ರಾಜ್ಯದಲ್ಲೇ ಪ್ರಥಮ ಪ್ರಕರಣ
ಪೋಕ್ಸೋ ಕಾಯಿದೆಯಡಿ ಒಬ್ಬ ಆರೋಪಿ ವಿರುದ್ಧ 21 ಪ್ರಕರಣಗಳು ದಾಖಲಾಗಿರುವುದು ಕರ್ನಾಟಕದ ಇತಿಹಾಸದಲ್ಲೇ ಪ್ರಥಮ ಆಗಿದೆ. ತನಿಖಾ ಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಇನ್ನು ಹೆಚ್ಚಿನ ಪ್ರಕರಣಗಳು ಆತನ ವಿರುದ್ಧ ದಾಖಲಾಗುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ಆರೋಪಿ ಮೇಲಿನ ಆರೋಪ ಸಾಬೀತಾದರೆ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಉಡುಪಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News