×
Ad

ಮಂದಿರ, ಮಸೀದಿಗಳ ಹೆಸರಲ್ಲಿ ರಕ್ತಪಾತ ಸಲ್ಲದು: ಶಾಫಿ ಸಅದಿ

Update: 2018-12-03 18:35 IST

ಮಂಗಳೂರು, ಡಿ. 3: ಅನಿವಾಸಿ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ಕನೆಕ್ಟ್- 2018’ ಸಾಮುದಾಯಿಕ ಸಮ್ಮಿಲನದಲ್ಲಿ 'ಮೀಲಾದ್ ಸ್ನೇಹ ಸಂಗಮ' ಸಮಾರಂಭವನ್ನು ಇಹ್‌ಸಾನ್ ಕರ್ನಾಟಕ ಫೌಂಡೇಶನ್ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಂದಿರ, ಮಸೀದಿಗಳ ಹೆಸರಲ್ಲಿ ರಕ್ತಪಾತ ಸಲ್ಲದು. ಬಾಬರಿ ಮಸೀದಿ, ಶ್ರೀರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಮುಸ್ಲಿಂ ಸಮುದಾಯ ಸ್ವೀಕರಿಸಲಿದೆ. ತೀರ್ಪನ್ನು ವಿರೋಧಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬಂದ್ ಗಳನ್ನು ಮಾಡಿ, ವಿವಾದಾತ್ಮಕ ಹೇಳಿಕೆ ಕೊಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಹೇಳಿದರು.

ಸಂವಿಧಾನದ ಚೌಕಟ್ಟಿನಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ 1992 ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸಮಿತಿಯೊಂದನ್ನು ನೇಮಕ ಮಾಡಿದ್ದರು. ಅದು ಎಂಟು ವರ್ಷಗಳಲ್ಲಿ 18 ಕೋಟಿ ರೂ. ಖರ್ಚು ಮಾಡಿ ವರದಿಯನ್ನು ಸಲ್ಲಿಸಲಾಗಿತ್ತು. ಅದರಲ್ಲಿ ರಾಮನ ವಿಗ್ರಹ ಇರುವ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ಎಂದರು.

ಅಲಹಾಬಾದ್ ಹೈಕೋರ್ಟ್ ಕೂಡ ಆ ಜಾಗವನ್ನು ಮೂರು ಭಾಗ ಮಾಡಿ ತೀರ್ಪನ್ನು ನೀಡಿತ್ತು. ಆ ತೀರ್ಪಲ್ಲೂ ರಾಮನ ವಿಗ್ರಹಗಳು ಇದ್ದವು ಎನ್ನುವುದನ್ನು ಹೇಲಿಲ್ಲ. ಸುಪ್ರೀಂಕೋರ್ಟ್ ನಲ್ಲಿ ನೀಡುವ ತೀರ್ಪನ್ನು ಸಮುದಾಯ ಸ್ವಾಗತಿಸಲಿದೆ ಎಂದು ಹೇಳಿದರು.

ಕರ್ನಾಟಕ ಹಜ್ ಸಮಿತಿ ಸದಸ್ಯ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ವಹಿಸಿದ್ದರು.

ವೇದಿಕೆಯಲ್ಲಿ ರಾಜ್ಯ ಎಸ್‌ವೈಎಸ್ ಉಪಾಧ್ಯಕ್ಷ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು, ರಾಜ್ಯ ಎಸ್‌ವೈಎಸ್ ಕೋಶಾಧಿಕಾರಿ ಯೂಸುಫ್ ಹಾಜಿ ಉಪ್ಪಳ್ಳಿ, ರಾಜ್ಯ ಎಸ್‌ವೈಎಸ್ ಉಪಾಧ್ಯಕ್ಷ ಹೈದರಲಿ ಕಾಮಿಲ್ ನಿಝಾಮಿ ಶಿವಮೊಗ್ಗ, ರಾಜ್ಯ ಎಸ್‌ವೈಎಸ್ ಕಾರ್ಯದರ್ಶಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ರಾಜ್ಯ ಎಸ್‌ವೈಎಸ್ ಕಾರ್ಯದರ್ಶಿ ಉಸ್ಮಾನ್ ಅಬ್ದುಲ್ಲಾ ಕೊಡಗು, ಟೀಂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸಂಚಾಲಕ ಅಶ್ರಫ್ ಸಅದಿ ಮಲ್ಲೂರು, ಎಸ್‌ವೈಎಸ್ ದ.ಕ. ಜಿಲ್ಲಾ ಅಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ಎಸ್‌ವೈಎಸ್ ಮಂಗಳೂರು ರೆನ್ ಅಧ್ಯಕ್ಷ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯಃ ಮತ್ತಿತರರು ಉಪಸ್ಥಿತರಿದ್ದರು.

ಸುನ್ನೀ ಕೋಆರ್ಡಿನೇಶನ್ ಸಮಿತಿ ಕರ್ನಾಟಕ ಕೋಶಾಧಿಕಾರಿ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ ದುಆಗೈದರು. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಯೂಸುಫ್ ಬೆಂಗಳೂರು ಸ್ವಾಗತಿಸಿದರು.ಎಸ್‌ವೈಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News