ಇನ್ನು ಮುಂದೆ ಟಿವಿಗಳಲ್ಲಿ ವಾಟ್ಸ್‌ಆ್ಯಪ್‌ ಜಾಹೀರಾತು: ಕಾರಣವೇನು ಗೊತ್ತಾ ?

Update: 2018-12-03 13:59 GMT

ಹೊಸದಿಲ್ಲಿ,ಡಿ.3: ತನ್ನ ವೇದಿಕೆಯ ದುರುಪಯೋಗಕ್ಕಾಗಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ ವಾಟ್ಸ್ ಆ್ಯಪ್ ತಪ್ಪುಮಾಹಿತಿಗಳು ಮತ್ತು ಹಾನಿಕಾರಕ ವದಂತಿಗಳ ಸವಾಲನ್ನು ಎದುರಿಸುವ ತನ್ನ ಪ್ರಯತ್ನಗಳ ಅಂಗವಾಗಿ ಭಾರತದಲ್ಲಿ ತನ್ನ ಪ್ರಪ್ರಥಮ ಟಿವಿ ಜಾಹೀರಾತು ಅಭಿಯಾನವನ್ನು ಸೋಮವಾರದಿಂದ ಆರಂಭಿಸಿದೆ.

 ವಾಟ್ಸ್‌ಆ್ಯಪ್ ಈ ಮೊದಲು ಆ.29ರಿಂದ ಬಳಕೆದಾರರಲ್ಲಿ ಜಾಗೃತಿಯನ್ನು ಮೂಡಿಸಲು ಎರಡು ಹಂತಗಳಲ್ಲಿ ರೇಡಿಯೊ ಪ್ರಚಾರ ಅಭಿಯಾನವನ್ನು ನಡೆಸಿತ್ತು.

ಟಿವಿ ಪ್ರಚಾರಕ್ಕಾಗಿ ಬಳಕೆದಾರರ ನಡುವೆ ಹರಡುವ ಅಪಾಯಕಾರಿ ವದಂತಿಗಳ ನಿಜವಾದ ಚಿತ್ರಣವನ್ನು ನೀಡಿರುವ ತಲಾ 60 ಸೆಕೆಂಡ್ ಅವಧಿಯ ಮೂರು ಚಿತ್ರಗಳನ್ನು ಚಿತ್ರನಿರ್ಮಾಪಕಿ ಶೀರ್ಷಾ ಗುಹಾ ಥಾಕುರ್ತಾ ಅವರು ವಾಟ್ಸ್ ಆ್ಯಪ್‌ಗಾಗಿ ನಿರ್ಮಿಸಿದ್ದಾರೆ.

ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಈ ಅಭಿಯಾನವನ್ನು ಆರಂಭಿಸಲಾಗಿದ್ದು,ಜಾಹೀರಾತುಗಳು ಒಂಭತ್ತು ಭಾಷೆಗಳಲ್ಲಿ ಟಿವಿ,ಫೇಸ್‌ಬುಕ್ ಮತ್ತು ಯು ಟ್ಯೂಬ್‌ಗಳಲ್ಲಿ ಪ್ರಸಾರಗೊಳ್ಳಲಿವೆ. 2019ರ ಲೋಕಸಭಾ ಚುನಾವಣೆಗಳಿಗೆ ಸಿದ್ಧವಾಗಲು ತನ್ನ ಈ ಪ್ರಯತ್ನವನ್ನು ಹೆಚ್ಚಿಸುವುದಾಗಿ ವಾಟ್ಸ್ ಆ್ಯಪ್ ತಿಳಿಸಿದೆ.

 ಜನರು ತಮ್ಮ ಪ್ರೀತಿಪಾತ್ರರನ್ನು ಮುಕ್ತವಾಗಿ ಸಂಪರ್ಕಿಸಲು ವಾಟ್ಸ್‌ಆ್ಯಪ್ ಅನುವು ಮಾಡಿಕೊಟ್ಟಿದೆ. ಇದೇ ವೇಳೆ ಅದು ತಪ್ಪುಮಾಹಿತಿಗಳ ಹರಡುವಿಕೆಗೆ ಅವಕಾಶ ನೀಡಿದೆ ಎನ್ನುವುದನ್ನು ನಾವು ಗುರುತಿಸಿದ್ದೇವೆ ಮತ್ತು ಇದನ್ನು ಎದುರಿಸಲಾಗುವುದು ಎಂದು ಜಾಹೀರಾತು ಚಿತ್ರಗಳ ನಿರ್ಮಾಣದ ನೇತೃತ್ವ ವಹಿಸಿದ್ದ ಬಾಸ್ಕೊ ಝೂಬಿಯಾಗಾ ತಿಳಿಸಿದರು.

ಭಾರತದಲ್ಲಿ 200 ಮಿಲಿಯನ್‌ಗೂ ಅಧಿಕ ಬಳಕೆದಾರರಿರುವ ವಾಟ್ಸ್ ಆ್ಯಪ್‌ನಲ್ಲಿ ಹರಡಿದ್ದ ವದಂತಿಗಳು ದೇಶದಲ್ಲಿ ನಡೆದಿದ್ದ ಹಲವಾರು ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ್ದು,ಈ ಪಿಡುಗನ್ನು ತಡೆಯುವಂತೆ ಸರಕಾರವು ವಾಟ್ಸ್ ಆ್ಯಪ್‌ಗೆ ಕಠಿಣ ಸಂದೇಶವನ್ನು ರವಾನಿಸಿತ್ತು.

ಕಳೆದ ಹಲವಾರು ತಿಂಗಳುಗಳಿಂದ ವಾಟ್ಸ್‌ಆ್ಯಪ್ ತನ್ನ ವೇದಿಕೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ಸುಳ್ಳುವದಂತಿಗಳನ್ನು ಹರಡದಂತೆ ಮತ್ತು ವದಂತಿಗಳು ಹರಿದಾಡಿದಾಗ ಗ್ರೂಪ್‌ನ್ನು ತೊರೆಯುವ ಸೌಲಭ್ಯ ಮತ್ತು ಅಪರಿಚಿತ ಸಂದೇಶ ರವಾನೆದಾರರನ್ನು ಬ್ಲಾಕ್ ಮಾಡುವ ಸೌಲಭ್ಯಗಳಂತಹ ಹಲವಾರು ನಿಯಂತ್ರಣ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಈಗ ಅದು ನಿರ್ಮಿಸಿರು ಜಾಹೀರಾತು ಚಿತ್ರಗಳಲ್ಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News