ಚೆನ್ನೈನ ಮರೀನಾ ಬೀಚ್‌ನಲ್ಲಿ ಪ್ರತಿಭಟನೆಗಳಿಗೆ ಅವಕಾಶವಿಲ್ಲ: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ
ಹೊಸದಿಲ್ಲಿ, ಡಿ.3: ಚೆನ್ನೈನ ಮರಿನಾ ಬೀಚ್‌ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಸೋಮವಾರ ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ರೈತಸಂಘದ ನಾಯಕ ಪಿ.ಅಯ್ಯಾಕುನ್ನು ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯವು,ಮರೀನಾ ಬೀಚ್ ಪ್ರವಾಸಿ ತಾಣವಾಗಿದೆ ಮತ್ತು ಅಲ್ಲಿ ಪ್ರತಿಭಟನೆಗಳಿಗೆ ಅವಕಾಶ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಹೇಳಿತು.
ಬೀಚ್‌ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸುವ ತಮಿಳುನಾಡು ಸರಕಾರದ ನಿರ್ಧಾರವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಸೆಪ್ಟೆಂಬರ್‌ನಲ್ಲಿ ಎತ್ತಿ ಹಿಡಿದಿತ್ತು. ಸಾರ್ವಜನಿಕ ಶಾಂತಿಯೂ ಅಷ್ಟೇ ಮುಖ್ಯವಾಗಿರುವುದರಿಂದ ಬೀಚ್‌ನ್ನು ಪ್ರತಿಭಟನೆಗಳಿಗೆ ಬಳಸುವಂತಿಲ್ಲ ಎಂದು ಅದು ತನ್ನ ಆದೇಶದಲ್ಲಿ ತಿಳಿಸಿತ್ತು.
ಎಪ್ರಿಲ್‌ನಲ್ಲಿ ಮರೀನಾ ಬೀಚ್‌ನಲ್ಲಿ ಕಾವೇರಿ ವಿವಾದ ಕುರಿತು ನಡೆದಿದ್ದ ದಿಢೀರ್ ಪ್ರತಿಭಟನೆಯಲ್ಲಿ ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದರು. ಇದಕ್ಕೂ ಮುನ್ನ ಜನವರಿ,2017ರಲ್ಲಿ 30,000ಕ್ಕೂ ಅಧಿಕ ಜಲ್ಲಿಕಟ್ಟು ಪರ ಪ್ರತಿಭಟನಾಕಾರರು ಒಂದು ವಾರ ಕಾಲ ಬೀಚ್‌ನಲ್ಲಿ ಪ್ರತಿಭಟನೆ ನಡೆಸಿ ಈ ವಿವಾದಾಸ್ಪದ ಕ್ರೀಡೆಯ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆಯು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಸಂಘರ್ಷಗಳಲ್ಲಿ ಕೊನೆಗೊಂಡಿತ್ತು.