×
Ad

ಸಂವಿಧಾನದಲ್ಲಿ ಎಲ್ಲ ಧರ್ಮಗಳು ಸಮಾನ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-12-03 21:37 IST

ಮಂಗಳೂರು, ಡಿ.3: ಸಂವಿಧಾನ ಮಾನವೀಯ ನೆಲೆಗಟ್ಟಿನಲ್ಲಿ ರಚನೆಯಾಗಿದೆ. ದೇಶದಲ್ಲಿ ಎಲ್ಲ ಧರ್ಮಗಳ ಜನರು ಒಂದೇ ಕುಟುಂಬದ ಸದಸ್ಯರಂತೆ ಬದುಕಬೇಕು. ಸಂವಿಧಾನದಲ್ಲಿ ಎಲ್ಲ ಧರ್ಮಗಳು ಸಮಾನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ಕನೆಕ್ಟ್- 2018’ ಸಾಮುದಾಯಿಕ ಸಮ್ಮಿಲನದ ’ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನ, ಬೌದ್ಧ ಜನಾಂಗಗಳು ಭಾರತದಲ್ಲಿದ್ದು, ಯಾವುದೇ ಧರ್ಮವೂ ಮೇಲಲ್ಲ; ಯಾವುದೂ ಕೀಳಲ್ಲ. ಸಿದ್ದರಾಮಯ್ಯ ಒಂದೇ ಧರ್ಮವನ್ನು ಓಲೈಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ತಾನು ಸಂವಿಧಾನಕ್ಕೆ ಬದ್ಧನಾಗಿ ಅಧಿಕಾರ ನಡೆಸಿದ್ದೇನೆ. ಸಂವಿಧಾನದಲ್ಲಿ ದ್ವೇಷ ಮಾಡಲು ಎಲ್ಲೂ ಹೇಳಿಲ್ಲ. ಸಹಬಾಳ್ವೆ, ಸಹಿಷ್ಣುತೆ, ಸಾಮರಸ್ಯ ಕಾಪಾಡಲು ಹೇಳಿದೆ ಎಂದು ಅವರು ವಿವರಿಸಿದರು.

ಭಾರತ ಸಂಪದ್ಭರಿತ ದೇಶ. ದೇಶದ ಎಲ್ಲ ಸಂಪತ್ತಿನಲ್ಲಿ ದೇಶದ ಪ್ರತಿಯೊಬ್ಬರ ಪಾಲು ಇದೆ. ವಿಪರ್ಯಾಸವೆಂದರೆ ದೇಶದಲ್ಲಿ ಕೆಲವೇ ಜನರ ಬಳಿ ಹೆಚ್ಚಿನ ಸಂಪತ್ತು ಶೇಖರಣೆಯಾಗಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾನ ಸಂಪತ್ತು ಹಂಚಿಕೆಯಾಗಬೇಕು. ಆ ನಿಟ್ಟಿನಲ್ಲಿಯೇ ತನ್ನ ಕಾಲಾವಧಿಯಲ್ಲಿ ಅಧಿಕಾರ ನಡೆಸಿದ್ದೇನೆ. ವಿನಃ ಯಾವುದೇ ಧರ್ಮವನ್ನು ಓಲೈಸಲು ತಾನು ಮುಂದಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ ಅವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮಾತೃಪೂರ್ಣ ಕಾರ್ಯಕ್ರಮಗಳು ಎಲ್ಲರಿಗೂ ಸಹಕಾರಿಯಾಗಿವೆ. ಅದನ್ನು ಕೆಲವರು ಸಹಿಸಲಿಲ್ಲ. ಯಾವುದಕ್ಕೂ ತಾನು ಹೆದರುವವನಲ್ಲ. ಸಂವಿಧಾನಕ್ಕೆ ಸದಾ ಬದ್ಧನಾಗಿದ್ದೇನೆ. ಸಂವಿಧಾನವೇ ನನಗೆ ಮಾರ್ಗದರ್ಶನವಾಗಿದೆ ಎಂದರು.

ಎನ್‌ಡಿಎ ನೇತೃತ್ವದ ಬಿಜೆಪಿ ಸರಕಾರವು ಕೇಂದ್ರದಲ್ಲಿ ಅಧಿಕಾರ ನಡೆಸಲು ಸಂಪೂರ್ಣವಾಗಿ ವಿಫಲವಾಗಿದೆ. ಅವರ ಭರವಸೆಗಳೆಲ್ಲವೂ ಸುಳ್ಳಾಗಿವೆ. ಕಷ್ಟ ಬಂದಾಗ ಮಾತ್ರ ಶ್ರೀರಾಮನನ್ನು ಹಿಡಿದುಕೊಳ್ಳುತ್ತಾರೆ. ಚುನಾವಣೆ ಬಳಿಕ ರಾಮನನ್ನು ಮರೆತುಬಿಡುತ್ತಾರೆ. ಎಲ್ಲರೂ ಸಂವಿಧಾನದ ಫಲಾನುಭವಿ ಗಳಾಗಿದ್ದಾರೆ. ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅವಕಾಶ ವಂಚಿತರಿಗೆ ಹೆಚ್ಚು ಸೌಲಭ್ಯಗಳನ್ನು ವಿತರಿಸಬೇಕು. ಅಂದಾಗ ಮಾತ್ರ ಸಂವಿಧಾನ ಆಶಯ ಈಡೇರುತ್ತದೆ ಎಂದರು.

ಕಳೆದ ಸರಕಾರದಲ್ಲಿ ಅಲ್ಪಸಂಖ್ಯಾತರಿಗೆ 3,100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಅದು ನನಗೆ ಇನ್ನೂ ಸಂತಸ ತಂದಿಲ್ಲ. ಈ ಬಾರಿಯೂ ಅಧಿಕಾರಕ್ಕೆ ಬಂದಿದ್ದರೆ 10 ಸಾವಿರ ಕೋಟಿ ರೂ.ನ್ನು ಬಿಡುಗಡೆ ಮಾಡುತ್ತಿದೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕು. ಸಮ್ಮಿಶ್ರ ಸರಕಾರಕ್ಕೆ ತಾನು ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುವುದಾಗಿ ಭರವಸೆ ನೀಡಿದರು.

ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ದಕ್ಷಿಣ ಕನ್ನಡ ಶಾಂತಿಯುತ ಜಿಲ್ಲೆಯಾಗಿದೆ. ಹಲವು ಮಂದಿ ಜಿಲ್ಲೆಯನ್ನು ಉದ್ರೇಕಗೊಳಿಸಲು ಯತ್ನಿಸಿದ್ದರೂ ಜಿಲ್ಲೆಯ ಜನತೆ ಶಾಂತಿಯುತವಾಗಿದ್ದರು. ಜಿಲ್ಲೆಗೆ ತಾನು ಸದಾ ಆಭಾರಿಯಾಗಿರುತ್ತೇನೆ. ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮ ನಿಜಕ್ಕೂ ಮಾದರಿಯಾಗಿದೆ ಎಂದರು.

ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಅಬ್ದುಲ್ಲಾ ಕುಂಞಿ ಯೆನೆಪೊಯ ಮಾತನಾಡಿ, ಕನೆಕ್ಟ್ 2018 ಸಾಮುದಾಯಿಕ ಸಮ್ಮಿಲನ ಸಮಾರಂಭ ದಲ್ಲಿ ದಾರುಲ್ ಅಮಾನ್ ವಸತಿ ಯೋಜನೆ ಮಹತ್ವಕಾರಿಯಾಗಿದೆ. ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಭಾರತ ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲಿಯೇ ಹೆಸರುಗಳಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಭಾಷಣ ನೆರವೇರಿಸಿದರು. ಸುನ್ನೀ ಜಮೀಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ತಾಜುಲ್ ಫುಖಹಾಅ ಶೈಖುನಾ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

ಅಂತರರಾಷ್ಟ್ರೀಯ ಕುರ್ ಆನ್ ಪಾರಾಯಣದಲ್ಲಿ ಭಾರತವನ್ನು ಪ್ರತಿನಿಧಿಸಿದ ಹವ್ವಾ ಯು.ಟಿ. ಅವರ ಪರವಾಗಿ ಸಚಿವ ಯು.ಟಿ.ಖಾದರ್ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಜಮೀಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷ ತಾಜುಲ್ ಫುಖಹಾಅ ಶೈಖುನಾ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ, ಹಾಜಿ ಎಸ್.ಎಂ. ಅಬ್ದುಲ್ ರಶೀದ್, ಕಣಚೂರು ಮೋನು ಹಾಜಿ, ಬಿ.ಎಚ್. ಖಾದರ್, ಎನ್.ಎಸ್.ಕರೀಂ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್, ಮಾಜಿ ಶಾಸಕ ಮೊಯ್ದಿನ್ ಬಾವ, ಮಾಜಿ ಮೂಡಾ ಅಧ್ಯಕ್ಷ ಇಬ್ರಾಹೀಂ ಕೊಡಿಜಾಲ್, ಕಾಂಗ್ರೆಸ್‌ನ ಹರೀಶ್ ಕುಮಾರ್, ವಾರ್ತಾಧಿಕಾರಿ ಖಾದರ್ ಶಾ, ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಆಡೂರು ತಂಙಳ್, ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಎಡಪ್ಪಾಲ್ ನಾಇಬ್ ಖಾಝಿ ಶೈಖುನಾ ಕೆ.ಎ. ಮುಹಮ್ಮದ್ ಮುಸ್ಲಿಯಾರ್, ಎಸ್‌ಎಂಎ ಕರ್ನಾಟಕ ಅಧ್ಯಕ್ಷ ಸೈಯದ್ ಜಲಾಲುದ್ದೀನ್ ಹಾದಿ ತಂಙಳ್ ಮದನಿ ಉಜಿರೆ, ಸೈಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ರಾಜ್ಯ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸೈಯದ್ ಹಾಮೀಂ ಶಿಹಾಬುದ್ದೀನ್ ತಂಙಳ್ ಮಿಸ್‌ಬಾಹಿ ಬಾಳೆಹೊನ್ನೂರು, ಸೈಯದ್ ಶಾಫಿ ನಈಮಿ ಜಮಲುಲ್ಲೆಲಿ ತಂಙಳ್ ಮಾರ್ನಹಳ್ಳಿ ಸಕಲೇಶಪುರ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಜಾಮಿಯ್ಯ ಸಅದಿಯ್ಯ ಕಾಸರಗೋಡು ಪ್ರೊ.ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಅಬೂಸುಫ್ಯಾನ್ ಎಚ್.ಐ. ಇಬ್ರಾಹೀಂ ಮದನಿ ಕಾಟಿಪಳ್ಳ, ಎಸ್‌ಜೆಎಂ ಕರ್ನಾಟಕ ಅಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ಎಸ್‌ಎಂಎ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಎನ್.ಎ. ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಎಸ್‌ಜೆಯು ದ.ಕ. ಜಿಲ್ಲಾ ಅಧ್ಯಕ್ಷ ಮುಹಮ್ಮದಲಿ ಫೈಝಿ ಬಾಳೆಪುಣಿ, ಎಸ್‌ಜೆಯು ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೆ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಡಿಕೆಎಸ್‌ಸಿ ಮೂಳೂರು ಜನರಲ್ ಮ್ಯಾನೇಜರ್ ಮುಸ್ತಫ ಸಅದಿ ಶಿರ್ವ, ಮಹ್‌ಬೂಬ್ ಸಖಾಫಿ ಕಿನ್ಯ, ದ್ಸಿಕ್ರಾ ಕ್ಯಾಂಪಸ್ ಮೂಡುಬಿದಿರೆ ಚೇರ್‌ಮೆನ್ ನೌಫಲ್ ಸಖಾಫಿ ಕಳಸ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್.ಅಬ್ದುಲ್ಲ ಹಾಜಿ ತೌಫೀಖ್ ನಾವುಂದ, ಇಬ್ರಾಹೀಂ ಬಾವ ಹಾಜಿ ಮಂಗಳೂರು, ಸುಪ್ರೀಂ ಟ್ರೇಡರ್ಸ್‌ನ ಸಿದ್ದೀಖ್ ಹಾಜಿ, ಹಾಜಿ ಎ.ಎಚ್. ಅಬೂಬಕರ್ ಸಕಲೇಶ್‌ಪುರ, ಹಾಜಿ ಸೈಯದ್ ಮೀರಾನ್ ಸಾಹೇಬ್ ಕಡಬ, ಎಸ್ಸೆಸ್ಸೆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಡ್ವ್ವೊಕೇಟ್ ಕೆ.ಎಂ. ಇಲ್ಯಾಸ್, ಎಸ್‌ಎಂಎ ಕರ್ನಾಟಕ ಕಾರ್ಯದರ್ಶಿ ಎಂ.ಬಿ.ಎಂ. ಸಾದಿಖ್ ಮಲೆಬೆಟ್ಟು, ಎಸ್ಸೆಸ್ಸೆಫ್ ಕರ್ನಾಟಕ ಕೋಶಾಧಿಕಾರಿ ಶರೀಫ್ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಮುಸ್ಲಿಂ ಸಂಯುಕ್ತ ಜಮಾಅತ್ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ ಬುಖಾರಿ ದುಆಗೈದರು. ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಸ್ವಾಗತಿಸಿದರು. ಎಸ್‌ವೈಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಎ. ಸಿದ್ದೀಕ್ ಸಖಾಫಿ ಮೂಳೂರು ವಂದಿಸಿದರು. ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News