×
Ad

ಮಾರುಕಟ್ಟೆ ಅಭಿವೃದ್ಧಿಯಲ್ಲಿ ಗುಣಮಟ್ಟದ ಹಾಲು ಅತಿಅಗತ್ಯ: ರವಿರಾಜ್ ಹೆಗ್ಡೆ

Update: 2018-12-04 19:19 IST

ಉಡುಪಿ, ಡಿ.4: ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಮತ್ತು ರೈತರಿಗೆ ಹಾಲಿಗೆ ಹೆಚ್ಚಿನ ಹಣ ದೊರಕುವಲ್ಲಿ ಗುಣಮಟ್ಟದ ಹಾಲಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರು ಕಟ್ಟೆಯಲ್ಲಿ ಪ್ರಗತಿ ಸಾಧ್ಯ ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದ್ದಾರೆ.

ಉಡುಪಿಯ ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆಯಲ್ಲಿ ಧಾರವಾಡ ಕೆಎಂಎಫ್ ತರಬೇತಿ ಘಟಕದ ಮೂಲಕ ಮೂರು ದಿನಗಳ ಕಾಲ ಆಯೋಜಿಸಲಾದ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರುಗಳ ಚೇತನಾ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು
ಕೆಎಂಎಫ್ ನಿವೃತ್ತ ಜಂಟಿ ನಿರ್ದೇಶಕ ಡಿ.ಎಸ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ಅಶೋಕ ಕೆ. ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ಆರ್.ಎಸ್.ಅಂಗಡಿ ಕಾಯರ್ಕ್ರಮ ನಿರೂ ಪಿಸಿ, ವಂದಿಸಿದರು.

ಮೂರು ದಿನಗಳ ಈ ತರಬೇತಿಯಲ್ಲಿ ಧಾರವಾಡ, ಬೆಳಗಾಂ, ಬೀದರ್ ಹಾಗೂ ಶಿವಮೊಗ್ಗ ಒಕ್ಕೂಟಗಳ ಅಧ್ಯಕ್ಷರು ಸೇರಿದಂತೆ ಒಟ್ಟು 65 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದು, ಉಡುಪಿ ಜಿಲ್ಲೆಯ ಮಾದರಿ ಹಾಲಿನ ಸಂಘ ಮತ್ತು ಯಶಸ್ವಿ ಹೈನುಗಾರರ ಭೇಟಿಯೊಂದಿಗೆ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News