ದೇಶದ ಜೈಲುಗಳಲ್ಲಿ 67 ಶೇ. ವಿಚಾರಣಾಧೀನ ಕೈದಿಗಳು

Update: 2018-12-04 15:22 GMT

ಹೊಸದಿಲ್ಲಿ,ಡಿ.4: ದೇಶದ ತುಂಬಿ ತುಳುಕುತ್ತಿರುವ ಜೈಲುಗಳಲ್ಲಿರುವ ಶೇ.67 ಕೈದಿಗಳು ವಿಚಾರಣಾಧೀನರಾಗಿರುವ ಬಗ್ಗೆ ಚಿಂತೆ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ ಇವರ ವಿರುದ್ಧದ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳವಾರ ಸೂಚಿಸಿದೆ.

ವಿಚಾರಣಾಧೀನ ಕೈದಿಗಳ ಪ್ರಕರಣಗಳನ್ನು ಪರಿಶೀಲಿಸಲು 2019ರ ಮೊದಲ ಆರು ತಿಂಗಳು ಪ್ರತಿ ತಿಂಗಳು ಸಭೆ ಸೇರುವಂತೆ ಮತ್ತು ವರದಿಗಳನ್ನು ರಾಜ್ಯಗಳ ಕಾನೂನು ಸೇವಾ ಪ್ರಾಧಿಕಾರಗಳಿಗೆ ಒಪ್ಪಿಸುವಂತೆ ವಿಚಾರಣಾಧೀನರ ಪರಿಶೀಲನಾ ಸಮಿತಿಗಳಿಗೆ (ಯುಟಿಆರ್‌ಸಿ) ಆದೇಶಿಸಿದೆ. ಪ್ರತಿ ಜಿಲ್ಲೆಯಲ್ಲೂ ರಚಿಸಲಾಗಿರುವ ಯುಟಿಆರ್‌ಸಿಗಳು ವಿಚಾರಣಾಧೀನ ಕೈದಿಗಳ, ಶಿಕ್ಷೆಯ ಅವಧಿಯನ್ನು ಪೂರೈಸಿರುವ ಅಪರಾಧಿಗಳ ಮತ್ತು ಜಾಮೀನು ಅಥವಾ ಇತರ ಉಪಶಮನಗಳನ್ನು ಪಡೆದವರ ಬಿಡುಗಡೆಗೆ ಸಲಹೆ ನೀಡುತ್ತವೆ. ದೇಶದಲ್ಲಿರುವ ಕಾರಾಗೃಹಗಳಲ್ಲಿ ಕಳೆದ ವರ್ಷ ಡಿಸೆಂಬರ್ ವೇಳೆಗೆ 3.78 ಲಕ್ಷ ಕೈದಿಗಳನ್ನು ಬಂಧಿಸಿಡುವ ಸಾಮರ್ಥ್ಯ ಹೊಂದಿದ್ದರೆ ವಾಸ್ತವದಲ್ಲಿ ಇದೇ ವೇಳೆ 4.19 ಲಕ್ಷ ಕೈದಿಗಳನ್ನು ಜೈಲಿನಲ್ಲಿ ತುಂಬಲಾಗಿದೆ ಎಂಬ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ)ದ ವರದಿಯನ್ನು ಆಧರಿಸಿ ನ್ಯಾಯಾಧೀಶ ಮದನ್ ಬಿ.ಲೊಕುರ್ ನೇತೃತ್ವದ ಪೀಠ ಈ ಸೂಚನೆ ನೀಡಿದೆ.

ದೇಶದ 1,382 ಜೈಲುಗಳಲ್ಲಿ ಕೈದಿಗಳ ಅಮಾನವೀಯ ಪರಿಸ್ಥಿತಿಯ ಕುರಿತ ವಿಚಾರಣೆಯನ್ನು ಶ್ರೇಷ್ಟ ನ್ಯಾಯಾಲಯವು ನಡೆಸುತ್ತಿತ್ತು. ಇದೇ ವೇಳೆ ವಿಚಾರಣಾಧೀನ ಕೈದಿಗಳ ಶೀಘ್ರ ವಿಚಾರಣೆಯ ಕುರಿತ ಮನವಿಯನ್ನೂ ಘನ ನ್ಯಾಯಾಲಯ ಆಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News