×
Ad

ಮೊದಲ ದಿನ ಅಗ್ರಸ್ಥಾನದಲ್ಲಿ 12 ತಂಡಗಳಿಗೆ ತಲಾ 4 ಅಂಕಗಳು

Update: 2018-12-04 21:11 IST

 ಮಣಿಪಾಲ, ಡಿ.4: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ದಕ್ಷಿಣ ವಲಯ ಅಂತರ ವಿವಿ ಪುರುಷರ ಚೆಸ್ ಚಾಂಪಿಯನ್‌ಷಿಪ್ ಇಂದು ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನದ ಕೊನೆಗೆ ಎರಡು ಸುತ್ತಿನ ಪಂದ್ಯಗಳ ಕೊನೆಗೆ ಒಟ್ಟು 12 ತಂಡಗಳು ತಲಾ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿವೆ.

ನಾಲ್ಕು ದಿನಗಳ ಈ ಚಾಂಪಿಯನ್‌ಷಿಪ್‌ನಲ್ಲಿ ದಕ್ಷಿಣ ವಲಯದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಪಾಂಡಿಚೇರಿಯ ಒಟ್ಟು 57 ತಂಡಗಳು ಸ್ಪರ್ಧಿಸುತ್ತಿವೆ. ಸ್ವಿಸ್ ಲೀಗ್ ಮಾದರಿಯಲ್ಲಿ ಪ್ರತಿ ತಂಡಗಳು ಒಟ್ಟು ಏಳು ಪಂದ್ಯಗಳನ್ನು ಆಡಬೇಕಾಗಿದೆ.

ಟೂರ್ನಿಯನ್ನು ಶಿವಮೊಗ್ಗದ ಖ್ಯಾತ ಚೆಸ್ ಆಟಗಾರ ಅಂತಾರಾಷ್ಟ್ರೀಯ ಮಾಸ್ಟರ್ ಸ್ಟಾನಿ ಜೋರ್ಜ್ ಅಂತೋಣಿ ಅವರು ಉದ್ಘಾಟಿಸಿದರು. ಮಾಹೆ ವಿವಿಯಲ್ಲಿ ಚೆಸ್ ಸ್ಪರ್ಧೆಗೆ ಇರುವ ಸೌಲಭ್ಯವನ್ನು ಪ್ರಶಂಸಿಸಿದ ಅಂತೋಣಿ, ಈ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಇಲ್ಲಿ ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ಸ್‌ ಟೂರ್ನಿಯನ್ನು ಸಹ ಆಯೋಜಿಸಬಹುದಾಗಿದೆ ಎಂದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ಡಾ.ನಾರಾಯಮ ಸಭಾಹಿತ್ ಅತಿಥಿಗಳನ್ನು ಸ್ವಾಗತಿಸಿದರೆ, ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ವಂದಿಸಿದರು.

2158 ಸರಾಸರಿ ರೇಟಿಂಗ್‌ನೊಂದಿಗೆ ಹೈದರಾಬಾದ್‌ನ ಉಸ್ಮಾನಿಯಾ ವಿವಿ ಟೂರ್ನಿಯಲ್ಲಿ ಅಗ್ರಸೀಡ್ ತಂಡವಾಗಿದೆ. ಹಾಲಿ ಚಾಂಪಿಯನ್ ಚೆನ್ನೈನ ಅಣ್ಣಾ ವಿವಿ2121 ರೇಟಿಂಗ್‌ನೊಂದಿಗೆ ಎರಡನೇ ಸೀಡ್ ಪಡೆದಿದೆ.

ಎಸ್‌ಆರ್‌ಎಂ ವಿವಿಯ ಅಂತಾರಾಷ್ಟ್ರೀಯ ಮಾಸ್ಟರ್ ಎ.ಐ.ಮುತ್ತಯ್ಯ (2408), ಉಸ್ಮಾನಿಯಾ ವಿವಿಯ ಫಿಡೆ ಮಾಸ್ಟರ್ ಸಾಯಿಅಗ್ನಿ ಜೀವಿತ್ಸ್ (2336), ಮದರಾಸು ವಿವಿಯ ಕುಮಾರನ್ ಬಿ. ಹಾಗೂ ಅಣ್ಣಾ ವಿವಿಯ ಅಜಯ್ ಕೃಷ್ಣನ್ (2289) ಅವರು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಸ್ಟಾರ್ ಚೆಸ್ ಆಟಗಾರರಾಗಿದ್ದಾರೆ.

ಇಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವ ವಿವಿ ತಂಡಗಳು ಇದೇ ಡಿ.15ರಿಂದ ಮೀರತ್‌ನಲ್ಲಿ ನಡೆಯುವ ಅಖಿಲ ಭಾರತ ಅಂತರ ವಿವಿ ಚೆಸ್ ಟೂರ್ನಿಯಲ್ಲಿ ದಕ್ಷಿಣ ವಲಯದಿಂದ ಆಡಲು ತೇರ್ಗಡೆಗೊಳ್ಳಲಿವೆ. ಚೆನ್ನೈನ ಅಣ್ಣಾ ವಿವಿ ದಕ್ಷಿಣ ವಲಯದ ಹಾಲಿ ಚಾಂಪಿಯನ್ ತಂಡವಾದರೆ, ಚೆನ್ನೈನದೇ ಆದ ಎಸ್‌ಆರ್‌ಎಂ ವಿವಿ ರನ್ನರ್ ಅಪ್ ಆಗಿದೆ. ಬೆಂಗಳೂರಿನ ಪಿಇಎಸ್ ವಿವಿ ಹಾಗೂ ಕಲ್ಲಿಕೋಟೆ ವಿವಿಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಕಳೆದ ಬಾರಿಯ ಟೂರ್ನಿಯಲ್ಲಿ ಪಡೆದಿವೆ.

ಇಂದಿನ ಎರಡನೇ ಸುತ್ತಿನ ಪ್ರಮುಖ ಪಂದ್ಯಗಳಲ್ಲಿ ಉಸ್ಮಾನಿಯಾ ವಿವಿ(4), ಕೇರಳ ವಿವಿ(2)ಯನ್ನು, ಅಣ್ಣಾ ವಿವಿ(4) ಕಲ್ಲಿಕೋಟೆ (2) ವಿವಿಯನ್ನು, ಮದರಾಸು ವಿವಿ (4) ಆಂಧ್ರ ವಿವಿ (2)ಯನ್ನು, ಎಸ್‌ಆರ್‌ಎಂ ವಿವಿ (4) ಭಾರತಿಯಾರ್ ವಿವಿ (2)ಯನ್ನು, ಕಣ್ಣೂರು ವಿವಿ(4) ಬೆಂಗಳೂರಿನ ಪಿಇಎಸ್(2) ವಿವಿಯನ್ನು , ಸುರತ್ಕಲ್‌ನ ಕರ್ನಾಟಕ ನೇಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (4) ಎಂಎಸ್‌ವಿವಿ (2)ಯನ್ನು ಹಾಗೂ ಮಂಗಳೂರು ವಿವಿ (4), ಆಚಾರ್ಯ ನಾಗಾರ್ಜುನ ವಿವಿ (2)ಯನ್ನು ಪರಾಭವಗೊಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News