ಎಬಿವಿಪಿ ವಿರುದ್ಧ ಹರಿಹಾಯ್ದ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್

Update: 2018-12-04 15:42 GMT

ಪಾಟ್ನ,ಡಿ.4: ಪಾಟ್ನಾ ವಿಶ್ವವಿದ್ಯಾನಿಯದಲ್ಲಿ ತನ್ನ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಒಂದು ದಿನದ ನಂತರ ಈ ಬಗ್ಗೆ ಮಾತನಾಡಿರುವ ಸಂಯುಕ್ತ ಜನತಾದಳದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರುದ್ಧ ಹರಿಹಾಯ್ದಿದ್ದಾರೆ.

“ವಿಶ್ವವಿದ್ಯಾನಿಲಯ ಚುನಾವಣೆಯಲ್ಲಿ ಸೋಲುವ ಭಯವು ನನ್ನ ಕಾರಿನ ಮೇಲೆ ದಾಳಿ ನಡೆಸಿದ ಮಾತ್ರಕ್ಕೆ ಮರೆಯಾಗುವುದಿಲ್ಲ: ಎಂದು ಅವರು ಮಂಗಳವಾರ ಸಂಘ ಪರಿವಾರದ ವಿದ್ಯಾರ್ಥಿ ಘಟಕವನ್ನು ಕುಟುಕಿದ್ದಾರೆ. ಸೋಮವಾರ ಸಂಜೆ ಪ್ರಶಾಂತ್ ಕಿಶೋರ್, ಪಾಟ್ನ ವಿಶ್ವವಿದ್ಯಾನಿಲಯದ ಉಪಕುಲಪತಿ ರಸ್‌ಬಿಹಾರಿ ಪ್ರಸಾದ್ ಸಿಂಗ್ ಅವರ್ನು ಭೇಟಿಯಾಗಿ ತೆರಳುತ್ತಿದ್ದಂತೆ ವಿದ್ಯಾರ್ಥಿಗಳ ಗುಂಪು ಅವರ ಕಾರನ್ನು ಸುತ್ತುವರಿದು ಕಲ್ಲುಗಳನ್ನು ಎಸೆದಿತ್ತು. ಪ್ರಶಾಂತ್ ಕಿಶೋರ್ ಡಿಸೆಂಬರ್ 5ರಂದು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಉಪಕುಲಪತಿಯ ನಿವಾಸಕ್ಕೆ ಭೇಟಿ ನೀಡುವ ಮೂಲಕ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.

 ಸಂಯುಕ್ತ ಜನತಾದಳ ಸೇರಿರುವ ಪ್ರಶಾಂತ್ ಕಿಶೋರ್‌ಗೆ ಪಕ್ಷದಲ್ಲಿ ವಿದ್ಯಾರ್ಥಿ ಘಟಕವನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಸೋಮವಾರ ನಡೆದ ಘಟನೆಯಲ್ಲಿ ನನಗೆ ಯಾವುದೇ ಗಾಯಗಳು ಆಗಿಲ್ಲ ಎಂದು ಪ್ರಶಾಂತ್ ಕಿಶೋರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News