ಮಕ್ಕಳನ್ನು ಗುರಾಣಿಯಂತೆ ಬಳಸಿದವರ ವಿರುದ್ಧ ಕ್ರಮ: ಕೇರಳ ಸರಕಾರ

Update: 2018-12-05 13:58 GMT

ತಿರುವನಂತಪುರಂ, ಡಿ.5: ಶಬರಿಮಲೆಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣ ಹಾಗೂ ಪ್ರತಿಭಟನೆ ಸಂದರ್ಭದಲ್ಲಿ ಮಕ್ಕಳನ್ನು ಗುರಾಣಿಯಂತೆ ಬಳಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಇಂತಹ ಪ್ರಯತ್ನಗಳ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕೇರಳದ ಸಾಮಾಜಿಕ ನ್ಯಾಯ ಇಲಾಖೆಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಪ್ರತಿಭಟನೆಗೆ ಮಕ್ಕಳನ್ನು ಬಳಸಿಕೊಳ್ಳುವುದು ಬಾಲನ್ಯಾಯ ಕಾಯ್ದೆಗೆ ವಿರುದ್ಧವಾಗಿದ್ದು ಮಕ್ಕಳ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ಅಪರಾಧಕ್ಕೆ ಸಮವಾಗಿದೆ ಎಂದು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಸಚಿವೆ ತಿಳಿಸಿದರು. ಇತ್ತೀಚೆಗೆ ಶಬರಿಮಲೆಯಲ್ಲಿ ನಡೆದಿದ್ದ ಪ್ರತಿಭಟನೆಯೂ ಸೇರಿದಂತೆ ಹಲವಾರು ಪ್ರತಿಭಟನೆಗಳಲ್ಲಿ ಮಕ್ಕಳನ್ನು ಗುರಾಣಿಯಂತೆ ಬಳಸಲಾಗಿದೆ. ಇದಕ್ಕೆ ಸರಕಾರ ಅವಕಾಶ ನೀಡುವುದಿಲ್ಲ ಮತ್ತು ಇಂತಹ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ನುಡಿದರು. ಮಕ್ಕಳನ್ನು ಪ್ರತಿಭಟನೆಯಲ್ಲಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವ ಕುರಿತು ಸಿಪಿಐ(ಎಂ)ನ ಮುರಳಿ ಪೆರುನೆಲ್ಲಿ ಎತ್ತಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಇದೇ ವೇಳೆ, ಹರಕೆಯ ಸಲುವಾಗಿ ಮಕ್ಕಳನ್ನು ಶಬರಿಮಲೆ ದೇವಸ್ಥಾನಕ್ಕೆ ಕರೆತರುವುದು ತಪ್ಪಲ್ಲ ಎಂದವರು ಸ್ಪಷ್ಟಪಡಿಸಿದರು. ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್‌ನ ಆದೇಶವನ್ನು ವಿರೋಧಿಸಿ ಸಂಘಪರಿವಾರ ಸಂಘಟನೆಗಳು ಶಬರಿಮಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ನಾಮಜಪ’ ಚಳವಳಿಯಲ್ಲಿ ಹಲವಾರು ಮಕ್ಕಳೂ ಭಾಗವಹಿಸಿದ್ದರು. ಮಕ್ಕಳದ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಎರ್ನಾಕುಳಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ‘ಪೋಕ್ಸೊ’ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಇದೇ ಸಂದರ್ಭ ಸಚಿವೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News