×
Ad

ತಾಲಿಬಾನನ್ನು ಭಾರತದ ವಿರುದ್ಧ ಗುರಾಣಿಯಾಗಿ ಬಳಸುತ್ತಿರುವ ಪಾಕ್: ಅಮೆರಿಕ ಸೇನಾ ಕಮಾಂಡರ್

Update: 2018-12-05 20:03 IST

ವಾಶಿಂಗ್ಟನ್, ಡಿ. 5: ತಾಲಿಬಾನ್‌ಗೆ ಸಂಬಂಧಿಸಿದ ಪಾಕಿಸ್ತಾನದ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿರುವಂತೆ ಕಾಣುವುದಿಲ್ಲ, ಅದು ತಾಲಿಬಾನನ್ನು ಭಾರತದ ವಿರುದ್ಧ ಗುರಾಣಿಯಂತೆ ಬಳಸಿಕೊಳ್ಳುವುದನ್ನು ಮುಂದುವರಿಸುತ್ತಿದೆ ಎಂದು ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ಸಂಸದರಿಗೆ ಹೇಳಿದ್ದಾರೆ.

‘‘ಅಫ್ಘಾನಿಸ್ತಾನದ ದೀರ್ಘಾವಧಿ ಸ್ಥಿರತೆಯಲ್ಲಿ ಪಾಕಿಸ್ತಾನ ಪ್ರಧಾನ ಪಾತ್ರ ವಹಿಸಬೇಕಾಗಿದೆ’’ ಎಂದು ಮರೀನ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಕೆನೆತ್ ಮೆಕೆಂಝೀ ಜೂನಿಯರ್ ಹೇಳಿದರು.

ಅವರು ಮಂಗಳವಾರ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರಕಾರದ ನಡುವೆ ಮಾತುಕತೆಗಳನ್ನು ಏರ್ಪಡಿಸುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರವನ್ನು ವಹಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವು ದಿನಗಳ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆಯಲ್ಲಿ ನೆರವು ಕೋರಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಪತ್ರವೊಂದನ್ನು ಬರೆದಿರುವುದನ್ನು ಸ್ಮರಿಸಬಹುದಾಗಿದೆ.

‘‘ಅಫ್ಘಾನ್ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಪಾತ್ರ ವಹಿಸುವ ಬೆಳವಣಿಗೆಯನ್ನು ನಾನು ಸ್ವಾಗತಿಸುತ್ತೇನೆ. ಆದಾಗ್ಯೂ, ತಾಲಿಬಾನನ್ನು ಮಾತುಕತೆಯ ಮೇಜಿಗೆ ಕರೆತರುವಲ್ಲಿ ಪಾಕಿಸ್ತಾನ ತನ್ನ ಪೂರ್ಣ ಪ್ರಭಾವವನ್ನು ಬಳಸಿದಂತೆ ಕಾಣುವುದಿಲ್ಲ’’ ಎಂದರು.

‘‘ತಾಲಿಬಾನನ್ನು ಭಾರತದ ವಿರುದ್ಧದ ಗುರಾಣಿಯಾಗಿ ಬಳಸುವುದನ್ನು ಪಾಕಿಸ್ತಾನ ಮುಂದುವರಿಸಿರುವುದನ್ನು ನಾವು ಈಗ ನೋಡುತ್ತಿದ್ದೇವೆ’’ ಎಂದು ಮೆಕೆಂಝೀ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News