ಖಶೋಗಿ ಹತ್ಯೆಗೆ ಆದೇಶಿಸಿದ್ದು ಸೌದಿ ಯುವರಾಜ ಎನ್ನುವುದರಲ್ಲಿ ಸಂಶಯವಿಲ್ಲ: ಅಮೆರಿಕದ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳು

Update: 2018-12-05 14:40 GMT

ವಾಶಿಂಗ್ಟರ್, ಡಿ. 5: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಗೆ ಸಂಬಂಧಿಸಿ ಗುಪ್ತಚರ ಸಂಸ್ಥೆ ಸಿಐಎ ಮುಖ್ಯಸ್ಥೆ ವಿವರಣೆ ನೀಡಿದ ಬಳಿಕ, ಈ ಹತ್ಯೆಗೆ ಆದೇಶ ನೀಡಿರುವುದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಎನ್ನುವುದರಲ್ಲಿ ತಮಗೆ ಯಾವುದೇ ಸಂಶಯವಿಲ್ಲ ಎಂದು ಅಮೆರಿಕದ ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳು ಹೇಳಿದ್ದಾರೆ.

ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್‌ನಲ್ಲಿ ಅಕ್ಟೋಬರ್ 2ರಂದು ನಡೆದ ಕೊಲೆಯಲ್ಲಿ ಸೌದಿ ಯುವರಾಜ ಶಾಮೀಲಾಗಿರುವ ಸಾಧ್ಯತೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿರುವುದನ್ನು ಸ್ಮರಿಸಬಹುದಾಗಿದೆ.

ಈಗ ಅವರದೇ ರಿಪಬ್ಲಿಕನ್ ಪಕ್ಷದ ಸದಸ್ಯರು ಶ್ವೇತಭವನದ ಅಧಿಕೃತ ನಿಲುವಿಗೆ ವಿರುದ್ಧವಾಗಿ ನಿಲುವನ್ನು ತಳೆದಿದ್ದಾರೆ.

‘‘ಕೊಲೆಗೆ ಆದೇಶ ನೀಡಿದ್ದು ಯುವರಾಜ ಹಾಗೂ ಕೊಲೆ ನಡೆಯುತ್ತಿದ್ದಾಗ ಅವರಿಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿತ್ತು ಎಂಬ ಬಗ್ಗೆ ನನ್ನಲ್ಲಿ ಈಗ ಲವಲೇಶದ ಅನುಮಾನವೂ ಇಲ್ಲ’’ ಎಂದು ಸೆನೆಟ್ ವಿದೇಶ ಸಂಬಂಧಗಳ ಸಮಿತಿಯ ಅಧ್ಯಕ್ಷ ಬಾಬ್ ಕಾರ್ಕರ್ ಸುದ್ದಿಗಾರರಿಗೆ ಹೇಳಿದರು.

ಇನ್ನೋರ್ವ ರಿಪಬ್ಲಿಕನ್ ಸೆನೆಟರ್ ಹಾಗೂ ಟ್ರಂಪ್ ನಿಕಟವರ್ತಿಯೂ ಆಗಿರುವ ಲಿಂಡ್ಸೇ ಗ್ರಹಾಂ, ಸೌದಿ ಯುವರಾಜನ ವಿರುದ್ಧ ಶ್ವೇತಭವನ ತಳೆದಿರುವ ನಿಲುವನ್ನು ಟೀಕಿಸಿದರು.

‘‘ಸೌದಿ ಯುವರಾಜ ಓರ್ವ ಹುಚ್ಚ ಹಾಗೂ ಖಶೋಗಿ ಹತ್ಯೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಪ್ರಮಾಣದಲ್ಲಿ ಅವರು ಶಾಮೀಲಾಗಿದ್ದಾರೆ’’ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News