ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡದಿದ್ದರೆ ಪ್ರತಿಭಟನೆಗೆ ಬೆಂಬಲ: ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ, ಡಿ.5: ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿ ಟೋಲ್‌ಗೇಟ್‌ಗಳಲ್ಲಿ ಜಿಲ್ಲೆಯ ಜನತೆಯ ಬೇಡಿಕೆಯಂತೆ ಸ್ಥಳೀಯರಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಬೇಕು. ತಪ್ಪಿದ್ದಲ್ಲಿ ಟೋಲ್ ಹೋರಾಟ ಸಮಿತಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಬೆಂಬಲ ನೀಡುವುದಲ್ಲದೇ ಪ್ರತಿಭಟನೆಯಲ್ಲಿ ತಾನೂ ಪಾಲ್ಗೊಳ್ಳುವುದಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಬೇಕು. ಸರ್ವೀಸ್ ರಸ್ತೆಗಳ ಅಗತ್ಯವಿದ್ದೆಡೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕು. ಈಗಾಗಲೇ ದಿನಂಪ್ರತಿ ಅಪಘಾತವಾಗುತ್ತಿರುವ ಸ್ಥಳಗಳಲ್ಲಿ ರಸ್ತೆಯ ವಿನ್ಯಾಸ ಬದಲಿಸುವುದರ ಸಹಿತ ಅಗತ್ಯ ಬದಲಾವಣೆ ಮಾಡಬೇಕು. ಎಲ್ಲಾ ಮೇಲ್ಸೇತುವೆ, ಅಂಡರ್‌ಪಾಸ್‌ಗಳಲ್ಲಿ ಶೇ.100ರಷ್ಟು ಕಾಮಗಾರಿ ಮುಗಿಸಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹ ಮಾಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ, ನವಯುಗ ಸಂಸ್ಥೆಯವರಿಗೆ ಮತ್ತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಸೂಚಿಸಿದ್ದೇನೆ ಎಂದವರು ತಿಳಿಸಿದರು.
ಅದರೂ ಸಹ ನವಯುಗ ಸಂಸ್ಥೆ ಜಿಲ್ಲಾಡಳಿತದ ನೆರವಿನೊಂದಿಗೆ ಸ್ಥಳೀಯ ಜನತೆಯಿಂದ ಬಲವಂತವಾಗಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸಂದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಆದುದರಿಂದ ಸ್ಥಳೀಯರ ಬೇಡಿಕೆಯಂತೆ ಟೋಲ್‌ನಿಂದ ವಿನಾಯಿತಿ ನೀಡಬೇಕು ಮತ್ತು ಕಾಮಗಾರಿ ಪೂರ್ಣಗೊಳಿಸಲು ಅಂತಿಮ ಕಾಲಮಿತಿ ನಿಗದಿ ಮಾಡಬೇಕು. ಇಲ್ಲದಿದ್ದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಬೆಂಬಲ ನೀಡಿ ಸ್ವತಃ ತಾನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.