ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಎರಡು ಅಥವಾ ಮೂರು ಆಯ್ಕೆಗಳು: ಇಮ್ರಾನ್

Update: 2018-12-05 15:01 GMT

ಇಸ್ಲಾಮಾಬಾದ್, ಡಿ. 5: ಕಾಶ್ಮೀರ ವಿವಾದ ಪರಿಹಾರಕ್ಕೆ ಎರಡು ಅಥವಾ ಮೂರು ಆಯ್ಕೆಗಳಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ವಿವಾದವನ್ನು ಹಂತ ಹಂತವಾಗಿ ಮಾತುಕತೆಗಳ ಮೂಲಕ ಮಾತ್ರ ಬಗೆಹರಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪಾಕಿಸ್ತಾನದ ಟಿವಿ ನಿರೂಪಕರ ಗುಂಪಿನೊಂದಿಗೆ ಸೋಮವಾರ ಸಂಭಾಷಣೆ ನಡೆಸಿದ ಅವರು, ಪಾಕಿಸ್ತಾನದ ಬಳಿ ಇರುವ ಆಯ್ಕೆಗಳ ವಿವರಗಳನ್ನು ನೀಡಲು ನಿರಾಕರಿಸಿದರು.

‘‘ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಎರಡು ಅಥವಾ ಮೂರು ಪರಿಹಾರಗಳನ್ನು ಪಾಕಿಸ್ತಾನ ಪರಿಶೀಲಿಸುತ್ತಿದೆ. ಅವುಗಳನ್ನು ಹಂತ ಹಂತವಾಗಿ ಜಾರಿಗೊಳಿಸಬಹುದಾಗಿದೆ. ಆದರೆ, ಭಾರತದೊಂದಿಗೆ ಮಾತುಕತೆ ಆರಂಭಗೊಳ್ಳುವವರೆಗೆ ನಾನು ಅವುಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ’’ ಎಂದರು.

‘‘ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳ ಬಳಿ ಎರಡು ಮಾರ್ಗಗಳಿವೆ- ಒಂದೋ ಮಾತುಕತೆ ಅಥವಾ ಯುದ್ಧ. ಎರಡು ಪರಮಾಣು ಶಕ್ತ ದೇಶಗಳು ಯುದ್ಧದಲ್ಲಿ ತೊಡಗುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಯಾಕೆಂದರೆ, ಅಲ್ಲಿ ಊಹಿಸದ ಪರಿಣಾಮಗಳಿರುತ್ತವೆ’’ ಎಂದರು.

‘‘ಯುದ್ಧ ಒಮ್ಮೆ ಆರಂಭಗೊಂಡ ಬಳಿಕ, ಅದು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಪರೋಕ್ಷ ಯುದ್ಧದಲ್ಲಿ ನಾವಾಗಲಿ, ಅವರಾಗಲಿ ಗೆಲ್ಲಲು ಸಾಧ್ಯವಿಲ್ಲ’’ ಎಂದು ಪಾಕ್ ಪ್ರಧಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News