ಆರೋಪಿಗಳಿಬ್ಬರು ದೋಷಿಗಳು: ಡಿ.10ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

Update: 2018-12-05 16:13 GMT

ಕುಂದಾಪುರ, ಡಿ.5: ಮೂರು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ನಡೆದ ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳಿಬ್ಬರ ಮೇಲಿನ ಆರೋಪ ಸಾಬೀತಾಗಿರುವುದಾಗಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣ ವನ್ನು ಡಿ.10ಕ್ಕೆ ಪ್ರಕಟಿಸುವುದಾಗಿ ಆದೇಶ ನೀಡಿದೆ.

ಗಂಗೊಳ್ಳಿಯ ಮಹಮ್ಮದ್ ಜುನೈದ್ ಹಾಗೂ ವೆಲ್ಡಿಂಗ್ ಜಾಫರ್ ಪ್ರಕರಣದ ದೋಷಿಗಳಾಗಿದ್ದಾರೆ. ಇವರು 2015 ಜ.21ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಮುಖ್ಯರಸ್ತೆಯಲ್ಲಿರುವ ವೆಂಕಟೇಶ ಶೆಣೈ ಎಂಬವರ ವೆಂಕಟೇಶ್ವರ ಸ್ಟೋರ್ಸ್‌, ಅಂಗಡಿಯ ಗೋದಾಮು ಹಾಗೂ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಆಗಿನ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿತು. ಆರೋಪಿಗಳ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ಐಪಿಸಿ ಕಲಂ 451, ಕಲಂ 436 ಹಾಗೂ 427 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸ ಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ ಖಂಡೇರಿಯವರು ಆರೋಪಿಗಳಿಬ್ಬರ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಪು ನೀಡಿದರು. ಆರೋಪಿಗಳಿಗೆ ಡಿ.10 ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News