ಧರ್ಮಸ್ಥಳ : 86ನೇ ಸರ್ವಧರ್ಮ ಸಮ್ಮೇಳನ

Update: 2018-12-05 17:16 GMT

ಬೆಳ್ತಂಗಡಿ, ಡಿ. 5: ದಾನವೆಂಬುದು ಅತ್ಯಂತ ಮಹತ್ವದ ವಿಚಾರ, ಅದರ ಬಗ್ಗೆ ತಿಳಿದುಕೊಂಡು ದಾನವನ್ನು ನಮ್ಮಜೀವನದ ಅವಿಭಾಜ್ಯ ಅಂಗವಾಗಿ ರೂಪಿಸಿಕೊಳ್ಳಬೇಕು ಎಂದು ಗುಜರಾತ್‍ದ್ವಾರಕ ಸೂರ್ಯಪೀಠದ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ನುಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಬುಧವಾರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 86ನೇ  ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. 

ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯು ಎಲ್ಲಾ ಮತಧರ್ಮಗಳನ್ನು ಸ್ವೀಕರಿಸಿದ್ದಾನೆ ಎಂಬುದು ಇಲ್ಲಿನ ಕಾರ್ಯಚಟುವಟಿಕೆಗಳನ್ನು ಅವಲೋಕಿಸಿದಾಗ ವೇದ್ಯವಾಗುತ್ತದೆ. ದಾನ ಪರಂಪರೆಯಿಂದಾಗಿಯೇ  ಧರ್ಮಸ್ಥಳದ ಸಾಮಥ್ರ್ಯ ಅಧಿಕವಾಗಿದೆ ಎಂದರು.  ಮನುಷ್ಯಜೀವನ ಭಗವಂತನ ಅಸೀಮ ಕೃಪೆಯಿಂದ ನಿರ್ಮಾಣವಾಗಿದೆ. ಭಗವಂತ ನಮಗೆ  ಕೈ, ಕಣ್ಣು, ಶರೀರವನ್ನುದಾನ ಮಾಡಿದ್ದಾನೆ. ಹೀಗಾಗಿ ಈ ದಾನದ ಪರಂಪರೆಯನ್ನು ಮತ್ತೆ ನಾವು ಮುಂದುರವರಿಸಿಕೊಂಡು ಹೋಗಬೇಕಾಗಿದೆ. ನಾವು ದಾನಮಾಡಲು ಹಿಂದೇಟು ಹಾಕಲು ಕಾರಣ ನಮಗೆ ದಾನದ ಮಹಿಮೆ ಗೊತ್ತಿಲ್ಲದಿರುವುದೇ ಆಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಶಿಕ್ಷಣ ತಜ್ಞ, ಸಮಾಜ ಸುಧಾರಕ ಹಾಗೂ ಆಧ್ಯಾತ್ಮ ಮಾರ್ಗದರ್ಶಕ ಶ್ರೀ ಎಂ (ಮಮ್ತಾಜ್ ಆಲಿ)ಅವರು ನಮ್ಮದೇಶದ ವಿಶಾಲವಾದ ಆಧ್ಯಾತ್ಮಿಕ ಪರಂಪರೆಯಲ್ಲಿ ನಾವು ತಿಳಿದುಕೊಂಡಿರುವುದು ಅಲ್ಪಾಂಶ ಮಾತ್ರ. ಇದು ಕುರುಡರು  ಆನೆಯನ್ನು ವರ್ಣಿಸಿದಂತಾಗಿದೆ. ನಮ್ಮ ಕಣ್ಣುಗಳನ್ನು ತೆರೆದು ಎಲ್ಲ ಧರ್ಮಗಳನ್ನು ತಿಳಿದುಕೊಳ್ಳು ಪ್ರಯತ್ನಿಸಬೇಕು ವೇದಗಳ ಮಾತುಗಳು ಇಂದಿನ ವರ್ತಮಾನ ಸ್ಥಿತಿಗೆ ಅತೀ ಅವಶ್ಯವಾಗಿವೆ. ಮಾನವೀಯತೆಯಿಂದ ನಮ್ಮ ಮನಸ್ಸು ವಿಶಾಲವಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ಹೃದಯ ಗರ್ಭಗೃಹವಿದ್ದಂತೆ. ಇದರಲ್ಲಿ ಆಧ್ಯಾತ್ಮಿಕತೆಯ ಅನಾವರಣ ಆಗಬೇಕು ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರಹೆಗ್ಗಡೆಯವರು ಎಲ್ಲ ಧರ್ಮಗಳಲ್ಲಿರುವ ಸೂಕ್ತ ತತ್ವಗಳನ್ನು ಆಯ್ದು ಪ್ರೀತಿಸಿ ಮಾರ್ಗದರ್ಶನ ಪಡೆಯಲು ನಾವು ಕಲಿಯಬೇಕು ಆಗ ಮತ್ರ ಸಮಗ್ರ ವಿಶ್ವದ ಉದ್ದಾರವಾಗುತ್ತದೆ ಎಂದರು. 

ಧರ್ಮಗಳನ್ನು ಟೀಕಿಸುವವರಿರುತ್ತಾರೆ ರಚನಾತ್ಮಕವಾದ ಟೀಕೆಯ ಹೊರತು ಬರಿದೇ ಟೀಕೆಯಿಂದ ಯಾವ ಪ್ರಯೋಜನವೂ ಇಲ್ಲ ಧರ್ಮಗಳ ನಡುವೆ ಶಾಂತಿಯನ್ನು ಕಾಪಾಡಿಕೊಂಡುಬರುವುದು ಇಂದಿನ ಅಗತ್ಯವಾಗಿದೆ. ಧರ್ಮದ ಮೂಲ ಉದ್ದೇಶವೇ ಸಮನ್ವಯತೆಯಾಗಿದೆ ಎಂದ ಅವರು ವಿಶ್ವದೆಲ್ಲಡೆ ಯಿಂದ ಒಳ್ಳೆಯ ವಿಚಾರಗಳು ನಮ್ಮಲ್ಲಿಗೆ ಹರಿದು ಬರಲಿ ಆದರೆ ನಾವು ಅದರಲ್ಲಿರುವ ಬಣ್ಣ, ಗುರುತುಗಳಿಗೆ ಮಹತ್ವ ನೀಡದೆಒಳಿತನ್ನು ಸ್ವೀಕರಿಸೋಣ ಮೂಢನಂಬಿಕೆ ಹಾಗೂ ಧಾರ್ಮಿಕ ಮತಾಂಧತೆಯನ್ನು ಇಂದು ದೂರಮಾಡಬೇಕಾಗಿದೆ, ಧಾರ್ಮಕ ವಿಚಾರಗಳು ದುರುಪಯೋಗವಾಗುತ್ತಿರುವ ಈನ ದಿನಗಳಲ್ಲಿ ಇಂತಹ ಸಮ್ಮೇಳನಗಳು ಅಗತ್ಯವಿದೆ ಎಂದರು.

ನಂಬಿಕೆಗಳಲ್ಲಿ ಸತ್ಯ ಮಿಥ್ಯವೆಂಬ ಅಂತರವಿದೆ ಆಚಾರ್ಯರು, ಗುರುಗಳು ತಿಳಿಹೇಳಿದ ಪರಂಪರಾಗತವಾಗಿ ಆಚರಿಸಿಕೊಂಡು ಬಂದ ಸತ್ವಿಚಾರಗಳು ಒಂದೆಡೆ ಇದ್ದರೆ ಇನ್ನೊಂದೆಡೆಯಲ್ಲಿ ಲೋಹಕ್ಕೆ ತುಕ್ಕು ಹಿಡಿದಿರುವರೀತಿಯಲ್ಲಿನ ಅವಿವೇಕಿಗಳು ಸ್ವಾರ್ಥಿಗಳು ಹೇಳಿದ ಮೂಢನಂಬಿಕೆಗಳು ಕಂದಾಚಾರಗಳೂ ಇವೆ, ಹಿಂಸೆ ವೈಷಮ್ಯಗಳ ಮೂಲಕ ದೇಶ ವಿಭಜಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ ಈ ಕಾರಣದಿಂದಾಗಿ ಧರ್ಮಗಳ ನಡುವೆ ಸಮನ್ವಯತೆ, ಸಹಬಾಳ್ವೆ, ಸನ್ಮಾರ್ಗ, ಹಾಗೂ ಒಳಿತನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಕಾರ್ಯ ನಡೆಯಬೇಕಾಗಿದೆ ಎಂದರು. 

ಸಮ್ಮೇಳನದಲ್ಲಿ ಗಾಂಧೀಜಿಯವರ ದೃಷ್ಟಿಯಲ್ಲಿ ಧಾರ್ಮಿಕ ಸಮನ್ವಯತೆಯ ಬಗ್ಗೆ ಮಾಜಿ ಶಾಸಕ ಜೆ.ಆರ್ ಲೋಬೋ ಉಪನ್ಯಾಸ ಮಂಡಿಸಿದರು. ಸೂಫಿ ಸಿದ್ದಾಂತ ಮತ್ತು ಭವೈಕ್ಯತೆಯ ಬಗ್ಗೆ ಇಬ್ರಾಹಿಂ ಸುತಾರ ಬಾಗಲಕೋಟೆ ಅವರು ಹಾಗೂ ಜೈನಧರ್ಮದಲ್ಲಿ ಸಮನ್ವಯತೆ ಎಂಬ ವಿಷಯತ ಬಗ್ಗೆ ಡಾ. ಶ್ರೀಧರ್ ಅವರೂ ಉಪನ್ಯಾಸ ಮಂಡಿಸಿದರು. 

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಿ ಸುರೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಪ್ರೊ ಎಸ್. ಪ್ರಭಾಕರ್ ಉಪಸ್ಥಿತರಿದ್ದರು. ಡಾ. ಬಿ ಯಶೋವರ್ಮ ಹಾಗೂ ಸುನಿಲ್ ಪಂಡಿತ್ ಸ್ನ್ಮಾನ ಪತ್ರ ವಾಚಿಸಿದರು. ಡಾ, ಬಿ.ಪಿ.ಸಂಪತ್‍ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಎ.ಪಿ.ಎಂ.ಸಿ ಅಧ್ಯಕ್ಷ ಕೇಶವಗೌಡ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News