ಮಂಗಳೂರು ತಾಲೂಕಿನ ಜಿಲ್ಲೆಯ ವಿವಿಧೆಡೆ ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಬಾಧೆ
ಮಂಗಳೂರು, ಡಿ.5: ತಾಲೂಕಿನ ಮಂಗಳೂರು-ಬಿ, ಗುರುಪುರ, ಸುರತ್ಕಲ್, ಮೂಡುಬಿದಿರೆ ಹೋಬಳಿಗಳಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಬಾಧೆ ಕಾಣಿಸಿವೆ. ಭತ್ತದ ನೇಜಿ ಮಡಿಯಲ್ಲೂ ಈ ಬಾಧೆ ಕಂಡು ಬಂದಿದೆ. ಇದೊಂದು ರಸ ಹೀರುವ ಕೀಟವಾಗಿದ್ದು, ಭತ್ತದ ಸಸಿಯ ಬುಡಭಾಗದಲ್ಲಿ ನೀರಿನ ಮಟ್ಟಕ್ಕಿಂತ ಸ್ವಲ್ಪಮೇಲೆ ಗುಂಪು ಗುಂಪಾಗಿ ಕುಳಿತು ರಸ ಹೀರುವುದರಿಂದ ಸಸಿಯು ಹಳದಿಯಾಗಿ ಗರಿಗಳು ಸುಟ್ಟಂತೆ ಒಣಗಲು ಪ್ರಾರಂಭಿಸುತ್ತವೆ. ಕ್ರಮೇಣ ಬುಡಭಾಗವು ಕಪ್ಪಾಗಿ ಕೊಳೆಯುತ್ತದೆ.
ಹಿಂಗಾರು ಹಂಗಾಮಿನಲ್ಲಿ ಭತ್ತದ ಬೆಳೆ ಬೆಳೆಯುತ್ತಿರುವ ರೈತರು ಇದರ ಹತೋಟಿಗಾಗಿ ಈಗಾಗಲೇ ಬಿತ್ತನೆ, ನಾಟಿಯಾಗಿರುವ ಭತ್ತದ ತಾಕಿನಿಂದ ನೀರನ್ನು ಹೊರಹಾಕಿ ಬತ್ತಿಸಬೇಕು. ಈ ರೀತಿ 2-3 ದಿನಕ್ಕೊಮ್ಮೆ ಬತ್ತಿಸಿ ಪುನಃ ನೀರು ಕಟ್ಟಬೇಕು. ಹತೋಟಿ ಕ್ರಮವಾಗಿ ಪ್ರತಿ ಲೀಟರ್ ನೀರಿಗೆ 2 ಗ್ರಾಂ, ಅಸಿಫೇಟ್ ಹಾಗೂ 0.5 ಮಿ.ಲೀ. (1/2 ಮಿ.ಲೀ) ಡಿ.ಡಿ.ವಿ.ಪಿ ಕೀಟನಾಶಕವನ್ನು ಬೆರೆಸಿ ಭತ್ತದ ಬೆಳೆಯ ಬುಡಭಾಗಕ್ಕೆ ತಾಗುವಂತೆ ಬೆಳಗ್ಗೆ ಅಥವಾ ಸಂಜೆಯ ವೇಳೆ ತಂಪಾದ ಸಮಯದಲ್ಲಿ ಸಿಂಪಡಿಸಬೇಕು. (ಇದೇ ಮಿಶ್ರಣವನ್ನು ಸಸಿಮಡಿಯಲ್ಲೂ ಸಿಂಪರಣೆ ಮಾಡಬೇಕು.) 15 ದಿನದ ನಂತರ 2ನೇ ಬಾರಿ ಕೈಗೊಳ್ಳಬೇಕು. ಎಕರೆ ಪ್ರದೇಶದಲ್ಲಿ 150 ರಿಂದ 200 ಲೀ. ದ್ರಾವಣವನ್ನು ಬಳಸಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ದ.ಕ.ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.