ವಿಮೆ ಹಣಕ್ಕಾಗಿ ಬೇರೊಬ್ಬನನ್ನು ಕೊಂದು ತನ್ನ ಸಾವಿನ ನಾಟಕವಾಡಿದ ವ್ಯಕ್ತಿಯ ಬಂಧನ

Update: 2018-12-06 07:11 GMT

ಚಂಡೀಗಢ, ಡಿ.6: ದೊಡ್ಡ ಮೊತ್ತದ ವಿಮೆ ಪಡೆಯುವ ದುರುದ್ದೇಶದಿಂದ ಕಾರ್ಮಿಕನೊಬ್ಬನನ್ನು ಕೊಂದು ತನ್ನ ಕಾರಿನಲ್ಲಿ ಆತನ ಮೃತದೇಹಕ್ಕೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಪೊಲೀಸರು ಪಲ್ವಾಲ್ ರೈಲು ನಿಲ್ದಾಣದಿಂದ ಬಂಧಿಸಿದ್ದಾರೆ.

ಆರೋಪಿ ಆಕಾಶ್ ಎಂಬಾತ ಚಂಡೀಗಢದ ನಿವಾಸಿಯಾಗಿದ್ದಾನೆ. ಆಕಾಶ್ ಕುಟುಂಬಕ್ಕೆ ಆತನ ಹೆಸರಿನಲ್ಲಿದ್ದ ದೊಡ್ಡ ಮೊತ್ತದ ವಿಮೆ ಹಣ ಪಡೆಯುವ ಉದ್ದೇಶವಿತ್ತು. ಆಕಾಶ್ ಸೋದರಳಿಯ ರವಿ ಕುಮಾರ್ (29) ಎಂಬಾತ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದನೆಂದು ಹೇಳಲಾಗಿದ್ದು ಆತನನ್ನು ಹಿಮಾಚಲ ಪ್ರದೇಶದ ನಹಾನ್ ಎಂಬಲ್ಲಿಂದ ಈಗಾಗಲೇ ಬಂಧಿಸಲಾಗಿದೆ.

ನವೆಂಬರ್ 20ರಂದು ನಹಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿತ್ತು. ಜುಡ್ಡಾ ಕಾ ಜೋಹರ್ ಎಂಬಲ್ಲಿ ಕಾರೊಂದು ರಸ್ತೆ ಬದಿಗೆ ಡಿಕ್ಕಿ ಹೊಡೆದು ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸುಟ್ಟು ಕರಕಲಾಗಿತ್ತು ಎಂದು ದೂರಲಾಗಿತ್ತು. ಘಟನೆಯಲ್ಲಿ ತನ್ನ ಕಾರಿನೊಳಗಿದ್ದ ಆಕಾಶ್ ಎಂಬಾತ ಸತ್ತಿದ್ದಾನೆಂದೂ ಹೇಳಲಾಗಿತ್ತು. ಫೊರೆನ್ಸಿಕ್ ತಜ್ಞರೂ ಮರು ದಿನ ಕಾರು ಪರಿಶೀಲಿಸಿದ್ದರು.

ಆದರೆ ಘಟನೆ ನಡೆದ ಮರುದಿನವೇ ಮರಣ ಪ್ರಮಾಣ ಪತ್ರ ನೀಡುವಂತೆ ಆಕಾಶ್ ಕುಟುಂಬ ಒತ್ತಡ ಹೇರಲಾರಂಭಿಸಿದಾಗ ಪೊಲೀಸರಿಗೆ ಸಂಶಯ ಮೂಡಲಾರಂಭಿಸಿತ್ತು. ಕೆಲ ದಿನಗಳ ಹಿಂದೆ ಪಂಜಾಬ್ ಪೊಲೀಸರ ತಂಡ ನಹಾನ್‌ಗೆ ಆಗಮಿಸಿ ರಾಜಸ್ಥಾನದಿಂದ ನಾಪತ್ತೆಯಾಗಿರುವ ಕಾರ್ಮಿಕನೊಬ್ಬನನ್ನು ಹುಡುಕಲು ಆಗಮಿಸಿದಾಗ ಪೊಲೀಸರ ಸಂಶಯ ಮತ್ತಷ್ಟು ಬಲಗೊಂಡಿತ್ತು. ಈ ಕಾರ್ಮಿಕ ಆಕಾಶ್‌ಗಾಗಿ ಕೆಲಸ ಮಾಡುತ್ತಿದ್ದನಲ್ಲದೆ ಕೊನೆಯ ಬಾರಿ ಆತ ಆಕಾಶ್‌ಗೇ ಕರೆ ಮಾಡಿದ್ದ.

ತರುವಾಯ ರವಿ ಡಿಸೆಂಬರ್ 3ರಂದು ನಹಾನ್‌ಗೆ ಭೇಟಿ ನೀಡಿದಾಗ ಆತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆಕಾಶ್ ತನ್ನದೇ ಕಾರನ್ನು ಸುಟ್ಟಾಗ ರವಿ ಆತನ ಜತೆಗಿದ್ದನೆಂದು ತಿಳಿದು ಬಂದಿತ್ತು. ಆಕಾಶ್ ಉದ್ದೇಶಪೂರ್ವಕವಾಗಿ ತನ್ನ ಕಾರು ನವೆಂಬರ್ 19, 20ರ ರಾತ್ರಿ ಅಪಘಾತಕ್ಕೀಡಾಗುವಂತೆ ಮಾಡಿ ಅದರಲ್ಲಿ ಕಾರ್ಮಿಕನ ಮೃತದೇಹ ಇರುವಂತೆಯೇ ಬೆಂಕಿ ಹಚ್ಚಿದ್ದ.

ಆತ ಬಿಹಾರದಿಂದ ದಿಲ್ಲಿಗೆ ಡಿಸೆಂಬರ್ 4ರಂದು ರೈಲಿನಲ್ಲಿ ಸಂಚರಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು. ಆದರೆ ಆತ ಕಾರ್ಮಿಕನನ್ನು ಹೇಗೆ ಕೊಂದ ಎಂಬ ಬಗ್ಗೆ ವಿಚಾರಣೆಯಿಂದ ಇನ್ನಷ್ಟೇ ತಿಳಿಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News