ಮೊದಲ ಟೆಸ್ಟ್: ಪೂಜಾರ ಶತಕ; ಭಾರತ 250/9

Update: 2018-12-06 07:54 GMT

ಅಡಿಲೇಡ್, ಡಿ.6: ಅಗ್ರ ಕ್ರಮಾಂಕದ ದಾಂಡಿಗ ಚೇತೇಶ್ವರ ಪೂಜಾರ ಅವರ ತಾಳ್ಮೆಯ ಶತಕದ ಬೆಂಬಲದಿಂದ ಭಾರತ ತಂಡ ಗುರುವಾರ ಇಲ್ಲಿ ಆರಂಭವಾದ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆ ಹಾಕಿದೆ.

ಚೇತೇಶ್ವರ ಪೂಜಾರ ಅವರ 14ನೇ ಶತಕದ ನೆರವಿನಿಂದ ಭಾರತ ಮೊದಲ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 87.5 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 250 ರನ್ ಗಳಿಸಿದೆ. 246 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ ತಾಳ್ಮೆಯ ಶತಕ(123) ಸಿಡಿಸಿದ ಪೂಜಾರ 87.5 ಓವರ್‌ನಲ್ಲಿ ಕಮಿನ್ಸ್‌ಗೆ ರನೌಟಾದರು. ಪೂಜಾರ ರನೌಟಾದ ಬೆನ್ನಿಗೆ ದಿನದಾಟವನ್ನು ಕೊನೆಗೊಳಿಸಲು ಅಂಪೈರ್ ನಿರ್ಧರಿಸಿದರು.

ಅಡಿಲೇಡ್ ಓವಲ್‌ನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ, 86 ರನ್ ಗಳಿಸುವಷ್ಟರಲ್ಲಿ ಅಗ್ರ ನಾಲ್ವರು ದಾಂಡಿಗರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆಯಿತು. ಆಗ ತಂಡಕ್ಕೆ ಆಸರೆಯಾಗಿ ನಿಂತ ಚೇತೇಶ್ವರ ಪೂಜಾರ ಭಾರತ ಕಡಿಮೆ ಮೊತ್ತಕ್ಕೆ ಆಲೌಟಾಗದಂತೆ ನೋಡಿಕೊಂಡರು. 5ನೇ ವಿಕೆಟ್‌ಗೆ ರೋಹಿತ್ ಶರ್ಮಾ(37) ಅವರೊಂದಿಗೆ 45,  ಆರ್.ಅಶ್ವಿನ್(25) ಅವರೊಂದಿಗೆ 7ನೇ ವಿಕೆಟ್‌ಗೆ 62 ರನ್ ಹಾಗೂ 9ನೇ ವಿಕೆಟ್‌ಗೆ ಮುಹಮ್ಮದ್ ಶಮಿ ಅವರೊಂದಿಗೆ 40 ರನ್ ಜೊತೆಯಾಟದಲ್ಲಿ ಭಾಗಿಯಾದ ಪೂಜಾರ ತಂಡದ ಮೊತ್ತವನ್ನು 250ಕ್ಕೆ ತಲುಪಿಸಿದರು.

  ಶಿಸ್ತುಬದ್ಧ ಬೌಲಿಂಗ್ ಮಾಡಿದ್ದ ಆಸ್ಟ್ರೇಲಿಯದ ಪರ ವೇಗಿಗಳಾದ ಕಮಿನ್ಸ್(2-49), ಹೇಝಲ್‌ವುಡ್(2-52),ಸ್ಟಾರ್ಕ್(2-63), ಹಾಗೂ ಸ್ಪಿನ್ನರ್ ನಥಾನ್ ಲಿಯೊನ್(2-83) ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News