82 ವರ್ಷ ಹಳೆಯ ದಾಖಲೆ ಪುಡಿಗಟ್ಟಿದ ಯಾಸಿರ್ ಶಾ

Update: 2018-12-06 08:31 GMT

ಅಬುಧಾಬಿ, ಡಿ.6: ನ್ಯೂಝಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 82 ವರ್ಷ ಹಳೆಯ ದಾಖಲೆಯೊಂದನ್ನು ಮುರಿದ ಪಾಕಿಸ್ತಾನದ ಲೆಗ್-ಸ್ಪಿನ್ನರ್ ಯಾಸಿರ್ ಶಾ ಹೊಸ ಇತಿಹಾಸ ನಿರ್ಮಿಸಿದರು.

ನಾಲ್ಕನೇ ದಿನದಾಟವಾದ ಗುರುವಾರ ವಿಲಿಯಮ್ ಸೊಮರ್‌ವಿಲ್ಲೆ(4)ವಿಕೆಟನ್ನು ಉರುಳಿಸಿದ ಯಾಸಿರ್ ಟೆಸ್ಟ್‌ನಲ್ಲಿ ಅತ್ಯಂತ ವೇಗವಾಗಿ 200 ವಿಕೆಟ್ ಮೈಲುಗಲ್ಲು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯ ಮೂಲಕ ಎರಡನೇ ವಿಶ್ವ ಮಹಾಯುದ್ದ ಪೂರ್ವ ಇನ್ನೋರ್ವ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯದ ಕ್ಲಾರ್ರಿ ಗ್ರಿಮ್ಮೆಟ್ ನಿರ್ಮಿಸಿದ್ದ ದೀರ್ಘಕಾಲದ ದಾಖಲೆಯೊಂದನ್ನು ಮುರಿದರು.

1936ರಲ್ಲಿ ಗ್ರಿಮ್ಮೆಟ್ ಕೇವಲ 36 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಪೂರೈಸಿ ದಾಖಲೆ ನಿರ್ಮಿಸಿದ್ದರು. ಪಾಕ್ ಸ್ಪಿನ್ನರ್ ಯಾಸಿರ್ ಇದೀಗ ಕೇವಲ 33ನೇ ಪಂದ್ಯದಲ್ಲಿ 200 ವಿಕೆಟ್ ಪೂರೈಸಿದ್ದಾರೆ.

ಈ ಹಿಂದೆ ಭಾರತದ ಆಫ್-ಸ್ಪಿನ್ನರ್ ಆರ್.ಅಶ್ವಿನ್‌ಗೆ ಈ ದಾಖಲೆ ನಿರ್ಮಿಸುವ ಅವಕಾಶ ಒದಗಿಬಂದಿತ್ತು. ಆದರೆ, ಚೆನ್ನೈ ಸ್ಪಿನ್ನರ್ ಅಶ್ವಿನ್‌ಗೆ ದಾಖಲೆ ಮುರಿಯಲು ಒಂದು ಟೆಸ್ಟ್ ಕೊರತೆಯಾಯಿತು. ಅಶ್ವಿನ್ 37ನೇ ಟೆಸ್ಟ್‌ನಲ್ಲಿ ಈ ಮೈಲುಗಲ್ಲು ತಲುಪಿದ್ದರು.

ಆಸ್ಟೇಲಿಯದ ಮಾಜಿ ವೇಗಿ ಡೆನ್ನಿಸ್ ಲಿಲ್ಲಿ ಹಾಗೂ ಪಾಕ್‌ನ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ತಲಾ 38 ಟೆಸ್ಟ್‌ಗಳಲ್ಲಿ 200 ವಿಕೆಟ್ ತಲುಪಿದ್ದರು. ದಕ್ಷಿಣ ಆಫ್ರಿಕದ ವೇಗಿ ಡೇಲ್ ಸ್ಟೇಯ್ನಿ ತನ್ನ 39ನೇ ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಪೂರೈಸಿದ್ದರು. ವೇಗವಾಗಿ 200 ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನ ಭರ್ತಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News