ಉತ್ತರಪ್ರದೇಶ : ಬಿಜೆಪಿ ತೊರೆದ ಸಂಸದೆ ಸಾವಿತ್ರಿ ಬಾಯಿ ಫುಳೆ

Update: 2018-12-06 10:29 GMT

ಹೊಸದಿಲ್ಲಿ,ಡಿ.6 : ತಮ್ಮ ವಿವಾದಾಸ್ಪದ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಳೆ ಇಂದು ಪಕ್ಷವನ್ನು ತೊರೆದಿದ್ದಾರೆ. "ಭಾರತದ ಹಣವನ್ನು ದೇಶದ ಅಭಿವೃದ್ಧಿಗಾಗಿ ಉಪಯೋಗಿಸುವ ಬದಲು ಮೂರ್ತಿಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ'' ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದೂ ಅವರು ದೂರಿದ್ದಾರೆ. 

"ನಾನೊಬ್ಬಳು ಸಾಮಾಜಿಕ ಕಾರ್ಯಕರ್ತೆ. ನಾನು ದಲಿತರಿಗಾಗಿ ಕೆಲಸ ಮಾಡುತ್ತೇನೆ. ಆದರೆ ದಲಿತರಿಗೆ ಮೀಸಲಾತಿ ಒದಗಿಸಲು ಬಿಜೆಪಿ ಏನನ್ನೂ ಮಾಡುತ್ತಿಲ್ಲ,'' ಎಂದು ಬಹ್ರೈಚ್ ಕ್ಷೇತ್ರದ ಸಂಸದೆಯಾಗಿರುವ ಫುಳೆ ತಾವು ಬಿಜೆಪಿ ತೊರೆಯುತ್ತಿರುವುದಾಗಿ ಘೋಷಿಸಿದ ನಂತರ ಹೇಳಿಕೊಂಡರು.

ಹನುಮಾನ್ ಒಬ್ಬ ದಲಿತನಾಗಿದ್ದ ಹಾಗೂ ಮನುವಾದಿ ಜನರ ಗುಲಾಮನಾಗಿದ್ದ ಎಂದು ಫುಳೆ ಈ ಹಿಂದೆ ಆರೋಪಿಸಿದ್ದರು. "ಆತ ದಲಿತ ಹಾಗೂ ಮಾನವನಾಗಿದ್ದ. ಆತ ರಾಮನಿಗಾಗಿ ಎಲ್ಲವನ್ನೂ ಮಾಡಿದ. ಆದರೂ ಅವನಿಗೇಕೆ ಬಾಲ ನೀಡಲಾಗಿತ್ತು ಹಾಗೂ ಮುಖವನ್ನು ಕಪ್ಪಗಾಗಿಸಲಾಗಿತ್ತು? ಆತನನ್ನೇಕೆ ಕೋತಿಯನ್ನಾಗಿಸಲಾಗಿತ್ತು?'' ಎಂದು ಫುಳೆ ಪ್ರಶ್ನಿಸಿದ್ದರು. ಹನುಮಾನ್ ಒಬ್ಬ ದಲಿತನಾಗಿದ್ದ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಕ್ಕೆ ಪ್ರತಿಯಾಗಿ ಆಕೆ ಮೇಲಿನಂತೆ ಪ್ರತಿಕ್ರಿಯಿಸಿದ್ದರು.

ಮೇ ತಿಂಗಳಲ್ಲಿ ಆಕೆ ಜಿನ್ನಾರನ್ನು ಮಹಾಪುರುಷ್ ಎಂದು ಹೇಳಿ ವಿವಾದಕ್ಕೀಡಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News