ಮಾತಿನ ಮೋಡಿಗಾರನಿಗೆ ಧ್ವನಿಯೆ ಉಡುಗಿ ಹೋಗುವ ಅಪಾಯ !

Update: 2018-12-06 11:09 GMT

ಚಂಡೀಗಢ,ಡಿ.6 : ಕಳೆದ 17 ದಿನಗಳ ತನಕ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ಸತತವಾಗಿ ತೊಡಗಿಸಿಕೊಂಡಿದ್ದ ಪಂಜಾಬ್ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ತಮ್ಮ ಧ್ವನಿಯನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ವೈದ್ಯರು ಅವರಿಗೆ ಮೂರರಿಂದ ಐದು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಪಂಜಾಬ್ ರಾಜ್ಯದ ಸ್ಥಳೀಯಾಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವರಾಗಿರುವ ಸಿಧು ಅವರ ಧ್ವನಿ ಪೆಟ್ಟಿಗೆಗೆ ಹಾನಿಯಾಗಿದೆಯೆನ್ನಲಾಗಿದ್ದು  ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ ಹಾಗೂ ಸೂಕ್ತ ಚಿಕಿತ್ಸೆ ಪಡೆಯಲು ಅವರು ತೆರಳಿದ್ದಾರೆಂದು ಪಂಜಾಬ್ ಸರಕಾರ ತಿಳಿಸಿದೆ. ಆದರೆ ಸಿಧು ಎಲ್ಲಿ ಚಿಕಿತ್ಸೆ ಪಡೆಯಲಿದ್ದಾರೆಂಬ ಮಾಹಿತಿಯಿಲ್ಲ.

ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರಾಗಿದ್ದ ಸಿಧು ಕಳೆದ 17 ದಿನಗಳಲ್ಲಿ ರಾಜಸ್ಥಾನ, ಛತ್ತೀಸಗಢ, ಮಧ್ಯ ಪ್ರದೇಶ ಮತ್ತು ತೆಲಂಗಾಣದಲ್ಲಿ 70 ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

ಮಾತಿನ ಮಲ್ಲರೆಂದೇ ಖ್ಯಾತಿವೆತ್ತ ಸಿಧು ನವೆಂಬರ್ 28ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿದ ವೈಯಕ್ತಿಕ ಆಹ್ವಾನದ ಮೇರೆಗೆ ಕರ್ತಾರಪುರ್ ಕಾರಿಡಾರ್ ಶಂಕುಸ್ಥಾಪನೆಗೆ ಪಾಕಿಸ್ತಾನಕ್ಕೂ ತೆರಳಿದ್ದರು.

"ಸತತ ಹೆಲಿಕಾಪ್ಟರ್ ಹಾಗೂ ವಿಮಾನ ಪ್ರಯಾಣದಿಂದ ಆವರ ಆರೋಗ್ಯದ ಮೇಲೆ ಪರೀಣಾಮ ಬೀರಿದೆ ಅವರು ಕೆಲ ವರ್ಷಗಳ ಹಿಂದೆ ಡೀಪ್ ವೇನ್ ಥ್ರೊಂಬೋಸಿಸ್ ಎಂಬ ಸಮಸ್ಯೆಗೂ  ಚಿಕಿತ್ಸೆ ಪಡೆದಿದ್ದರು,'' ಎಂದು  ಹೇಳಿಕೆ ತಿಳಿಸಿದೆ. ಅವರಿಗೆ ಉಸಿರಾಟದ ವ್ಯಾಯಾಮ ಮತ್ತು ಫಿಸಿಯೋಥೆರಪಿ ನೀಡಲಾಗುತ್ತಿದೆ ಎಂಬ ಮಾಹಿತಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News