2019 - 2035 ರಲ್ಲಿ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುವ ಟಾಪ್ 10 ನಗರಗಳ ಪಟ್ಟಿ

Update: 2018-12-06 11:19 GMT

ಹೊಸದಿಲ್ಲಿ,ಡಿ.6 : ಮುಂದಿನ ಎರಡು ದಶಕಗಳಲ್ಲಿ (2019-2035) ಅತ್ಯಂತ ಹೆಚ್ಚು ಆರ್ಥಿಕ ಪ್ರಗತಿ ದಾಖಲಿಸಲಿರುವ ಜಗತ್ತಿನ 10 ನಗರಗಳ ಪಟ್ಟಿಯಲ್ಲಿ ಭಾರತ ಸಾರ್ವಭೌಮತ್ವ ಸ್ಥಾಪಿಸಲಿದೆ ಎಂದು ಆಕ್ಸ್ ಫರ್ಡ್ ಇಕನಾಮಿಕ್ಸ್ ಹೇಳಿದೆ.

ಗುಜರಾತ್‍ನ ಪ್ರಮುಖ ವಜ್ರ ಸಂಸ್ಕರಣಾ ಮತ್ತು ವ್ಯಾಪಾರ ಕೇಂದ್ರವಾಗಿರುವ ಸೂರತ್ ನಗರವು 2035ರ ತನಕ ಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳಲಿರುವ ನಗರವಾಗಲಿದ್ದು ಶೇ 9ಕ್ಕೂ ಅಧಿಕ ಅಭಿವೃದ್ಧಿ ಪ್ರಮಾಣ ದಾಖಲಿಸಲಿದೆ ಎಂದು ಆಕ್ಸ್ ಫರ್ಡ್ ನ ಗ್ಲೋಬಲ್ ಸಿಟೀಸ್ ರಿಸರ್ಚ್ ಮುಖ್ಯಸ್ಥ ರಿಚರ್ಡ್ ಹೊಲ್ಟ್ ಅವರ ವರದಿ ತಿಳಿಸಿದೆ. ಈ ಅವಧಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಎಲ್ಲಾ ಹತ್ತು ನಗರಗಳು ಭಾರತದ ನಗರಗಳಾಗಲಿವೆ. ಈ ಪಟ್ಟಿಯಲ್ಲಿ ಸೂರತ್(ಶೇ 9.17) ನಗರವನ್ನು ಹೊರತುಪಡಿಸಿ ನಂತರದ ಸ್ಥಾನಗಳನ್ನು ಆಗ್ರಾ (8.58), ಬೆಂಗಳೂರು (ಶೇ 8.5), ಹೈದರಾಬಾದ್ (ಶೇ 8.47), ನಾಗ್ಪುರ್ (ಶೇ 8.41), ತಿರುಪ್ಪುರ್ (ಶೇ 8.36), ರಾಜ್ ಕೋಟ್ (ಶೇ 8.33), ತಿರುಚಿರಾಪಳ್ಳಿ(ಶೇ 8.29), ಚೆನ್ನೈ(ಶೇ 8.17) ಹಾಗೂ ವಿಜಯವಾಡ(ಶೇ 8.16) ಪಡೆಯಲಿವೆ.

ಈಗ ಹಾಗೂ 2035ರ ಅವಧಿಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ನಗರಗಳ ಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆಯಾಗದು. ನ್ಯೂಯಾರ್ಕ್, ಟೋಕಿಯೋ, ಲಾಸ್ ಏಂಜಲಿಸ್ ಹಾಗೂ ಲಂಡನ್ ತಮ್ಮ ಸ್ಥಾನಗಳನ್ನು ಕಾಯ್ದುಕೊಳ್ಳಲಿದ್ದರೆ, 2 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಶಾಂಘೈ ಹಾಗೂ ಬೀಜಿಂಗ್ ನಗರಗಳು ಪ್ಯಾರಿಸ್ ಹಾಗೂ ಚಿಕಾಗೋವನ್ನು ಹಿಂದಿಕ್ಕಲಿವೆ. ದಕ್ಷಿಣ ಚೀನಾದ ಗುವಾಂಗ್‍ಝೌ ಹಾಗೂ ಶೆನ್ಝೆನ್ ನಗರಗಳು ಕೂಡ ಟಾಪ್ 10 ಪಟ್ಟಿಯಲ್ಲಿ ಬಂದು ಹಾಂಗ್ ಕಾಂಗ್ ಅನ್ನು ಹೊರಗಟ್ಟಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News