ಉ.ಪ್ರ ಪೊಲೀಸ್ ಅಧಿಕಾರಿ ಹತ್ಯೆ: ಮುಖ್ಯ ಆರೋಪಿಯ ಬಂಧನ

Update: 2018-12-06 14:13 GMT

ಹೊಸದಿಲ್ಲಿ,ಡಿ.6: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ತಂಡದ ಪ್ರಮುಖ ಆರೋಪಿ ಬಜರಂಗದಳದ ನಾಯಕ ಯೋಗೇಶ್ ರಾಜ್‌ನನ್ನು ಘಟನೆ ನಡೆದು ಮೂರು ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಗೋಹತ್ಯೆ ನಡೆದಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪ್ರತಿಭಟನೆ ನಡೆಸಿ ಹಿಂಸಾಚಾರದಲ್ಲಿ ತೊಡಗಿದ್ದ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಆಗಮಿಸಿದ್ದ ತಂಡದಲ್ಲಿದ್ದ ಪೊಲೀಸ್ ನಿರೀಕ್ಷಕ ಸುಬೋಧ್ ಕುಮಾರ್ ಸಿಂಗ್‌ರನ್ನು ಮುನ್ನೂರಕ್ಕೂ ಹೆಚ್ಚು ಜನರಿದ್ದ ತಂಡ ಸುತ್ತುವರಿದು ಗುಂಡಿಟ್ಟು ಹತ್ಯೆ ಮಾಡಿತ್ತು. ಸುಬೋಧ್ ಕುಮಾರ್ ಸಿಂಗ್ 2015ರಲ್ಲಿ ದಾದ್ರಿಯಲ್ಲಿ ಗುಂಪು ಹತ್ಯೆಗೊಳಗಾದ ಮುಹಮ್ಮದ್ ಅಖ್ಲಾಕ್ ಪ್ರಕರಣದ ತನಿಖೆ ನಡೆಸುತ್ತಿದ್ದರು. ಸಿಂಗ್ ಜೊತೆಗೆ 20ರ ಹರೆಯದ ಸುಮಿತ್ ಕುಮಾರ್ ಎಂಬ ಯುವಕನನ್ನೂ ಗುಂಪು ಗುಂಡಿಟ್ಟು ಹತ್ಯೆ ಮಾಡಿತ್ತು. ಬಂಧನಕ್ಕೂ ಒಂದು ದಿನದ ಮೊದಲು ತನ್ನ ಅಡಗುತಾಣದಿಂದಲೇ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದ ಆರೋಪಿ ಯೋಗೇಶ್ ರಾಜ್, ಹಿಂಸಾಚಾರ ನಡೆದ ಸಂದರ್ಭದಲ್ಲಿ ತಾನು ಆ ಸ್ಥಳದಲ್ಲಿರಲಿಲ್ಲ. ನನಗೂ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಉತ್ತರ ಪ್ರದೇಶ ಪೊಲೀಸರು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಯೋಗೇಶ್ ರಾಜ್‌ಗೂ ಬುಲಂದ್‌ಶಹರ್ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಪೊಲೀಸರಿಗೆ ಸಹಕರಿಸಲಿದ್ದಾರೆ ಮತ್ತು ಸೂಕ್ತ ಸಮಯದಲ್ಲಿ ಹೊರಗೆ ಬರಲಿದ್ದಾರೆ ಎಂದು ಪಶ್ಚಿಮ ಉತ್ತರ ಪ್ರದೇಶದ ಬಜರಂಗದಳದ ಸಹಸಂಚಾಲಕ ಪ್ರವೀಣ್ ಭಟ್ಟಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News