ಇಲ್ಲಿದೆ ಒಳ್ಳೆಯ ಸುದ್ದಿ! ವಾಹನ ವಿಮೆ ಪ್ರೀಮಿಯಂ ಶೀಘ್ರವೇ ಕಡಿಮೆಯಾಗಬಹುದು

Update: 2018-12-06 13:44 GMT

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ)ವು ಇತ್ತೀಚಿಗೆ ನೀಡಿರುವ ಸುಳಿವಿನಂತೆ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳಿಗೆ ವಿಮೆ ಪ್ರೀಮಿಯಂ ಮೊತ್ತ ಕಡಿಮೆಯಾಗಲಿದೆ. ಬಹುಶಃ ಮುಂದಿನ ಹಣಕಾಸು ವರ್ಷದಿಂದ ಮೋಟಾರು ವಾಹನಗಳಿಗೆ ಥರ್ಡ್ ಪಾರ್ಟಿ(ಟಿಪಿ)ಗಾಗಿ ವಾರ್ಷಿಕ ಪ್ರೀಮಿಯಂ ಅನ್ನು ನಿಗದಿಗೊಳಿಸುವ ಪರಿಪಾಠವನ್ನು ತಾನು ನಿಲ್ಲಿಸಬಹುದು ಎಂದು ಐಆರ್‌ಡಿಎಐ ಸುಳಿವು ನೀಡಿದೆ.

ಈಗಿರುವಂತೆ ಟಿಪಿ ವಿಮೆ ರಕ್ಷಣೆ ಪ್ರೀಮಿಯಂ ಅನ್ನು ಪ್ರಾಧಿಕಾರವೇ ನಿರ್ಧರಿಸುತ್ತದೆ ಮತ್ತು ಇದು ದೇಶಾದ್ಯಂತದ ಎಲ್ಲ ವಿಮಾ ಕಂಪನಿಗಳಿಗೂ ಒಂದೇ ಆಗಿದೆ. ಈ ಪದ್ಧತಿಯನ್ನು ಪ್ರಾಧಿಕಾರವು ಕೈಬಿಟ್ಟರೆ ವಿಮಾ ಕಂಪನಿಗಳು ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿ ದರಗಳಲ್ಲಿ ತಮ್ಮದೇ ಆದ ಪ್ರೀಮಿಂಯಂ ಅನ್ನು ಘೋಷಿಸಲು ಅವಕಾಶ ದೊರೆಯಲಿದೆ.

ಪ್ರಾಧಿಕಾರವು ಪ್ರೀಮಿಯಂ ನಿಗದಿಗೊಳಿಸುವುದನ್ನು ನಿಲ್ಲಿಸಬೇಕು ಮತ್ತು ವಿಮಾ ಕಂಪನಿಗಳು ಪ್ರೀಮಿಯಂ ಮೇಲೆ ರಿಯಾಯತಿಯನ್ನು ಘೋಷಿಸಲು ಅವಕಾಶ ನೀಡಬೇಕು ಎಂದು ಹಲವಾರು ಸಾಗಣೆದಾರರು ಕಳೆದ ಕೆಲವು ತಿಂಗಳುಗಳಿಂದ ಒತ್ತಾಯಿಸುತ್ತಿದ್ದಾರೆ. ಇದರಿಂದ ವಾಹನಗಳ ಮಾಲಿಕರಿಗೆ ವಿಮೆಯನ್ನು ಮಾಡಿಸಲು ಒಳ್ಳೆಯ ಪರ್ಯಾಯಗಳು ದೊರೆಯುತ್ತವೆ ಎನ್ನುವುದು ಅವರ ವಾದವಾಗಿದೆ.

ವಾಹನ ವಿಮೆಯ ಕುರಿತು ಹೇಳುವುದಾದರೆ ಹಾಲಿ ‘ಸ್ವಂತ ಹಾನಿ’ಗೆ ಸಂಬಂಧಿಸಿದಂತೆ ಯಾವುದೇ ಮಿತಿಯಿಲ್ಲ,ಹೀಗಾಗಿ ‘ಸ್ವಂತ ಹಾನಿ’ ವಿಮೆ ರಕ್ಷಣೆಯ ಪ್ರೀಮಿಯಂ ಮೊತ್ತದ ಮೇಲೆ ಹೆಚ್ಚಿನ ವಿಮಾ ಕಂಪನಿಗಳು ಭಾರೀ ರಿಯಾಯಿತಿಗಳನ್ನು ನೀಡುತ್ತಿವೆ.

ಇನ್ಶುರನ್ಸ್ ಇನ್‌ಫಾರ್ಮೇಷನ್ ಬ್ಯೂರೋದ ಇತ್ತೀಚಿನ ವರದಿಯಂತೆ 2016-17ನೇ ಹಣಕಾಸು ವರ್ಷದಲ್ಲಿ ವಿಮಾ ಕಂಪನಿಗಳು ಮೋಟಾರು ವಾಹನ ವಿಮೆಗಾಗಿ ಒಟ್ಟು ಸುಮಾರು 50,000 ಕೋ.ರೂ.ಪ್ರೀಮಿಯಂ ಸಂಗ್ರಹಿಸಿವೆ.

 ಭಾರತೀಯ ರಸ್ತೆ ಸುರಕ್ಷತೆ ಕಾಯ್ದೆ ಮತ್ತು ಭಾರತೀಯ ಮೋಟಾರು ವಾಹನಗಳ ಕಾಯ್ದೆಯಂತೆ ದೇಶದ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದೂ ವಾಹನವು ಟಿಪಿ ವಿಮೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ ನೂತನ ನಿಯಮದ ಜಾರಿಯೊಂದಿಗೆ ಎಲ್ಲ ಹೊಸ ಕಾರುಗಳಿಗೆ ಟಿಪಿ ವಿಮೆ ರಕ್ಷಣೆಯನ್ನು ಮೂರು ವರ್ಷಗಳ ಅವಧಿಗೆ ಕಡ್ಡಾಯಗೊಳಿಸಲಾಗಿದೆ. ಆದರೆ ಪ್ರೀಮಿಯಂ ದರಗಳಲ್ಲಿ ತೀವ್ರ ಏರಿಕೆಯನ್ನು ಹಿಂದೆಗೆದುಕೊಳ್ಳುವಂತೆ ಟ್ರಕ್ ಮಾಲಿಕರ ಬೇಡಿಕೆಯನ್ನು ಚರ್ಚಿಸಲು ಪ್ರಧಾನಿ ಕಚೇರಿಯು ಕರೆದಿದ್ದ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆಗಳು ನಡೆದಿವೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ತಮ್ಮ ಬೇಡಿಕೆಯನ್ನು ಬೆಂಬಲಿಸಿ ಟ್ರಕ್ ಮಾಲಿಕರು ಮುಷ್ಕರವನ್ನೂ ನಡೆಸಿದ್ದರು. ಈ ಸಂದರ್ಭದಲ್ಲಿ ಮುಂದಿನ ಹಣಕಾಸು ವರ್ಷದಿಂದ ಪ್ರೀಮಿಯಂ ಏರಿಕೆಯನ್ನು ಶೇ.28ರಿಂದ ಶೇ.10-15ಕ್ಕೆ ಇಳಿಸುವುದಾಗಿ ಪ್ರಾಧಿಕಾರವು ಭರವಸೆ ನೀಡಿತ್ತು.

ಟಿಪಿ ವಿಮೆ ಪ್ರೀಮಿಯಂ ಕಡಿಮೆಗೊಳಿಸಿ ಗ್ರಾಹಕರಿಗೆ ಲಾಭ ನೀಡಲು ಪ್ರಾಧಿಕಾರವು ಬಯಸಿದ್ದು,ಇದೇ ಕಾರಣದಿಂದ ತಾನು ನೀಡಿರುವ ಸುಳಿವನ್ನು ಸಾಧ್ಯವಾದಷ್ಟು ಶೀಘ್ರ ಕಾರ್ಯರೂಪಕ್ಕೆ ಇಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಟಿಪಿ ವಿಮೆ ಪ್ರೀಮಿಯಂ ಅನ್ನು ನಿರ್ಧರಿಸುವ ಹಕ್ಕು ವಿಮಾ ಕಂಪನಿಗಳಿಗೆ ದೊರಕಿದರೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳಿರುತ್ತವೆ ಮತ್ತು ಉತ್ತಮ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳ ಡೀಲರ್‌ಗಳು ಟಿಪಿ ಮತ್ತು ಕಾಂಪ್ರಿಹೆನ್ಸಿವ್ ಮೋಟಾರ್ ಪಾಲಿಸಿಯ ಸೌಲಭ್ಯಗಳನ್ನು ನೀಡುತ್ತಾರೆ ಹಾಗೂ ಸಾಮಾನ್ಯವಾಗಿ ಇವುಗಳ ಪ್ರೀಮಿಯಂ ನೂತನ ವಾಹನದ ಬೆಲೆಗಳಲ್ಲಿಯೇ ಸೇರಿರುತ್ತವೆ. ಆದರೆ ಆನ್‌ಲೈನ್‌ನಲ್ಲಿ ಇವೇ ಪಾಲಿಸಿಗಳು ಕಡಿಮೆ ಪ್ರೀಮಿಯಂಗಳಲ್ಲಿ ಲಭಿಸುತ್ತವೆ. ಹೀಗಾಗಿ ಕೈಗೆಟಕುವ ಬೆಲೆಗಳಲ್ಲಿ ಪಾಲಿಸಿಗಳನ್ನು ಬಯಸುವವರು ಅತ್ಯುತ್ತಮ ಕೊಡುಗೆಗಾಗಿ ಆನ್‌ಲೈನ್ ಸರ್ಚ್ ಮಾಡುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News