ಪುತ್ತೂರು: ಬಾಬರಿ ಮಸೀದಿ ಪುನರ್ ನಿರ್ಮಾಣ, ಅಲ್ಪ ಸಂಖ್ಯಾತರಿಗೆ ರಕ್ಷಣೆಗಾಗಿ ಮನವಿ

Update: 2018-12-06 14:13 GMT

ಪುತ್ತೂರು, ಡಿ. 6: ಬಾಬರಿ ಮಸೀದಿಯನ್ನು ಪುನರ್ ನಿರ್ಮಿಸಿ ಕೊಡುವಂತೆ ಹಾಗೂ ಅಲ್ಪ ಸಂಖ್ಯಾತರ ಜೀವ, ಸೊತ್ತುಗಳಿಗೆ ಸೂಕ್ತ ರಕ್ಷಣೆ ಒದಗಿಸಿಕೊಡುವಂತೆ ಆಗ್ರಹಿಸಿ ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್(ರಿ) ವತಿಯಿಂದ ರಾಷ್ಟ್ರಪತಿಗಳಿಗೆ ಪುತ್ತೂರು ಸಹಾಯಕ ಕಮೀಷನರ್ ಮೂಲಕ ಮನವಿ ಸಲ್ಲಿಸಲಾಯಿತು.

ನೂರಾರು ವರ್ಷಗಳಿಂದ ಮುಸ್ಲಿಮರ ಆರಾಧನಾ ಸ್ಥಳವಾಗಿದ್ದ ಪವಿತ್ರ ಬಾಬರಿ ಮಸೀದಿಯನ್ನು ದುಷ್ಕರ್ಮಿಗಳು ಕೆಡವಿ, ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಭಾರತದ ಸೌಹಾರ್ದ ಸಂಸ್ಕೃತಿಯನ್ನು ಹೊಡದು ಹಾಕಿದ್ದಾರೆ. ಇದರಿಂದ ಭಾರತದ ಕೋಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಮಾತ್ರವಲ್ಲದೆ ಸುಪ್ರಿಂ ಕೋರ್ಟಿನ ಆದೇಶವನ್ನು ದುಷ್ಕರ್ಮಿಗಳು ಧಿಕ್ಕರಿಸಿರುತ್ತಾರೆ. ಮಸೀದಿ ಕೆಡವಲ್ಪಟ್ಟ ಸಮಯದಲ್ಲಿ ಅದೇ ಸ್ಥಳದಲ್ಲಿ ಮಸೀದಿಯನ್ನು ಪುನರ್ ನಿರ್ಮಿಸಿ ಕೊಡುವುದಾಗಿ ಹಾಗೂ ಮುಸಲ್ಮಾನರ ಜೀವ ಸೊತ್ತುಗಳಿಗೆ ಸೂಕ್ತ ಭದ್ರತೆ ಕಲ್ಪಿಸಿ ಕೊಡುವುದಾಗಿ ಭಾರತ ಸರ್ಕಾರ ವಾಗ್ದಾನ ನೀಡಿತ್ತು. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದರೆ ಇದೀಗ ಮಸೀದಿ ಕೆಡವಲ್ಪಟ್ಟ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವ ರೂಪುರೇಶೆಗಳು ತಯಾರಾಗುತ್ತಿದೆ. ಭಾರತದ ಸಂವಿಧಾನವನ್ನು ಗೌರವಿಸುವ ಎಲ್ಲರೂ ಇದನ್ನು ವಿರೋಧಿಸುತ್ತಾರೆ. ಅಲ್ಲದೆ ವಿವಿಧ ಕಾರಣಗಳ ಮೂಲಕ ಮುಸಲ್ಮಾನರ, ದಲಿತರ ಹಾಗೂ ಹಿಂದುಳಿದವರ ವಿರುದ್ಧ ಗೂಂಡಾಗಿರಿ ಕೊಲೆಗಳು ನಡೆಯುತ್ತಿದೆ ಹಾಗೂ ಸೊತ್ತುಗಲಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ರಕ್ಷಣೆಯ ಕ್ರಮ ಕೈಗೊಳ್ಳಬೇಕು ಹಾಗೂ ಬಾಬರಿ ಮಸೀದಿಯನ್ನು ಕೆಡವಲು ಕಾರಣಕರ್ತರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ  ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಆಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಸಾಲ್ಮರ ಮಹಮ್ಮದ್ ಶರೀಫ್, ನ್ಯಾಯವಾದಿ ಮತ್ತು ಕಾನೂನು ಸಲಹೆಗಾರ ನೂರುದ್ದೀನ್ ಸಾಲ್ಮರ, ಪದಾಧಿಕಾರಿಗಳಾದ ಇಬ್ರಾಹಿಂ ಸಾಗರ್, ಹಮೀದ್ ಮೌಲ ಕಬಕ, ಶಾಕಿರ್ ಮಿತ್ತೂರು, ಸಲೀಂ ಮುರ, ಅಶ್ರಫ್ ಬಾವು, ರಶೀದ್ ಮುರ, ಯೂಸುಫ್ ತಾರಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News