ಗುಣಾತ್ಮಕ ಚಿಂತನೆಗಳಿಂದ ಯಶಸ್ಸು ಗಳಿಸಿ: ರಾಜೇಶ್‌ಪ್ರಸಾದ್

Update: 2018-12-06 14:29 GMT

ಉಡುಪಿ, ಡಿ.6: ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಅವರದೇ ಆದ ವಿಶಿಷ್ಟ ಸಾಮರ್ಥ್ಯವಿರುತ್ತದೆ. ಈ ಹುದುಗಿರುವ ಪ್ರತಿಭೆ ಅನಾವರಣಕ್ಕಾಗಿ ಗುಣಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಯಶಸ್ಸು ಸಾಧಿಸುವಂತೆ ಹೊಸದಿಲ್ಲಿಯಲ್ಲಿ ಜಿಎಸ್‌ಟಿ ಆಯುಕ್ತರಾಗಿರುವ ಐಎಎಸ್ ಅಧಿಕಾರಿ ಉಡುಪಿ ಮೂಲದ ರಾಜೇಶ್ ಪ್ರಸಾದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ರಾಜೇಶ್‌ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.

ವಿದ್ಯಾರ್ಥಿಯೊಬ್ಬನ ಶೈಕ್ಷಣಿಕ ಬದುಕಿನ 15ರಿಂದ 25 ವರ್ಷ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದದ್ದು. ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಪ್ರಾಯ ಇದಾಗಿದೆ. ಈ ಅವಧಿಯಲ್ಲೇ ಅಡಿಪಾಯವನ್ನು ಗಟ್ಟಿಗೊಳಿಸಬೇಕು. ಇದು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸುವ ಕಾಲಘಟ್ಟ ಎಂದು ಹೇಳಿದ ಅವರು, ಇದನ್ನು ಅರ್ಥ ಮಾಡಿಕೊಳ್ಳದೇ ಕಾಲಹರಣ ಮಾಡಿದರೆ ಮುಂದೆ ಜೀವನ ದಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಕಾಲೇಜು ಜೀವನದಲ್ಲಿ ಮೋಜು, ಕಾಲಹರಣಕ್ಕೆ ಚೌಕಟ್ಟಿನಮಿತಿ ಇರಬೇಕು. ಇಲ್ಲವೇ ಹೋದರೆ ಸಮಾಜ ಹಾಗೂ ಪೋಷಕರಿಗೆ ನಾವು ಹೊರೆಯಾಗು ತ್ತೇವೆ. ಗಾಂಧಿ ಮಹಾತ್ಮನಾಗಲು ಸತ್ಯ, ತ್ಯಾಗ, ಅಹಿಂಸೆ, ಪ್ರಾಮಾಣಿಕತೆ ಪ್ರಮುಖ ಅಂಶ ಎಂಬುದು ನಮಗೆ ಗೊತ್ತಿರಬೇಕು. ಈ ನಿಟ್ಟಿನಲ್ಲಿ ನಮ್ಮ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕಿದೆ ಎಂದರು.

ವಕೀಲ ಆತ್ರಾಡಿ ಪ್ರಥ್ವಿರಾಜ್ ಹೆಗ್ಡೆ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಪಿಯು ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಮಣಿಪಾಲ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎಚ್. ಶಾಂತರಾಮ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ನೇಹಾ ಭಟ್ ಸ್ವಾಗತಿಸಿ, ಪ್ರತೀಕ್ ವಂದಿಸಿದರು. ಶ್ರಾವ್ಯ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ವಿಭಾ ರಾವ್ ವರದಿ ವಾಚಿಸಿದರು. ಅನಿಶಾ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News