ದಕ್ಷಿಣ ವಲಯ ಅಂತರ ವಿವಿ ಚೆಸ್ ಚಾಂಪಿಯನ್‌ಷಿಪ್: ಅಣ್ಣಾಗೆ ಅಚ್ಚರಿ ಸೋಲು, ಪ್ರಶಸ್ತಿಯತ್ತ ಮದ್ರಾಸ್ ವಿವಿ

Update: 2018-12-06 15:16 GMT

ಮಣಿಪಾಲ, ಡಿ.6: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದಿರುವ ದಕ್ಷಿಣ ವಲಯ ಅಂತರ ವಿವಿ ಪುರುಷರ ಚೆಸ್ ಚಾಂಪಿಯನ್ ಷಿಪ್‌ನ ಮೂರನೇ ದಿನದಾಟದಲ್ಲಿ ಅತ್ಯಂತ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದ ಮದ್ರಾಸ್ ವಿವಿ, ಪ್ರಸ್ತಿ ಗೆಲ್ಲುವತ್ತ ದಾಪುಗಾಲು ಇಟ್ಟಿದೆ.

ದಕ್ಷಿಣ ವಲಯದ ಹಾಲಿ ಚಾಂಪಿಯನ್ ಆಗಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿದ್ದ ಚೆನ್ನೈನ ಅಣ್ಣಾ ವಿವಿಯನ್ನು ಆರನೇ ಸುತ್ತಿನ ಮುಖಾಮುಖಿ ಯಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲಿಸಿದ ಚೆನ್ನೈನ ಮದ್ರಾಸ್ ವಿವಿ, ಇನ್ನೊಂದು ಸುತ್ತಿನ ಪಂದ್ಯ ಉಳಿದಿರುತ್ತಾ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದೆ.

ಆರು ಸುತ್ತಿನ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಮದ್ರಾಸ್ ವಿವಿ, 12 ಅಂಕಗಳೊಂದಿಗೆ ಏಕೈಕ ತಂಡವಾಗಿ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಅಣ್ಣಾ ವಿವಿ ಈಗ 10 ಅಂಕಗಳನ್ನು ಗಳಿಸಿದೆ. ಇಲ್ಲಿ ಅಗ್ರಸೀಡ್ ಪಡೆದಿರುವ ಹೈದರಾಬಾದ್‌ನ ಉಸ್ಮಾನಿಯಾ ವಿವಿ, ಆರನೇ ಸುತ್ತಿನಲ್ಲಿ ತನ್ನ ಎದುರಾಳಿ ವಿರುದ್ಧ ಕೇವಲ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿ 9 ಅಂಕಗಳಿಸಿ ಹಿನ್ನಡೆಯಲ್ಲಿದೆ. ಟೂರ್ನಿಯ ಏಳನೇ ಹಾಗೂ ಕೊನೆಯ ಸುತ್ತಿನ ಪಂದ್ಯಗಳು ನಾಳೆನಡೆಯಲಿದ್ದು, ಇದು ತಂಡಗಳ ಅಂತಿಮ ಸ್ಥಾನಮಾನವನ್ನು ನಿರ್ಧರಿಸಲಿವೆ.

ಇಂದು ಟಾಪ್‌ಬೋರ್ಡ್‌ನಲ್ಲಿ ಮದ್ರಾಸ್ ವಿವಿ ಹಾಗೂ ಅಣ್ಣಾ ವಿವಿ ನಡುವೆ ನಡೆದ ಆರನೇ ಸುತ್ತಿನ ಪಂದ್ಯ ನಿಕಟ ಹೋರಾಟಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ ಮದ್ರಾಸ್ ವಿವಿ, ಅಣ್ಣಾ ವಿವಿಯನ್ನು ಸೋಲಿಸುವಲ್ಲಿ ಯಶಸ್ವಿ ಯಾಯಿತು. ಇದೀಗ ಮದ್ರಾಸ್ ವಿವಿ 12 ಅಂಕಗಳಿಸಿದ್ದು, ನಾಳೆ ಕೇವಲ ಡ್ರಾ ಸಾಧಿಸಿದರೂ ಚಾಂಪಿಯನ್ ತಂಡವಾಗಿ ಹೊರಹೊಮ್ಮಲಿದೆ.

ಅಣ್ಣಾ ವಿವಿ, ಆರು ಸುತ್ತಿನ ಕೊನೆಗೆ 10 ಅಂಕಗಳನ್ನು ಸಂಗ್ರಹಿಸಿದ್ದು, ಕಳೆದ ವರ್ಷದ ರನ್ನರ್ ಅಪ್ ಎಸ್‌ಆರ್‌ಎಂ ವಿವಿಯೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.ಎಸ್‌ಆರ್‌ಎಂ ವಿವಿ(10) ಇಂದು ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿ (8)ಯನ್ನು ಪರಾಭವಗೊಳಿಸಿತು.

ಸುರತ್ಕಲ್‌ನ ಕರ್ನಾಟಕ ನೇಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (9) ತಂಡ, ಇಂದು ಅಗ್ರಸೀಡ್ ಉಸ್ಮಾನಿಯಾ ವಿವಿ (9)ಯೊಂದಿಗಿನ ಆರನೇ ಸುತ್ತಿನ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಯಿತು.

ಶುಕ್ರವಾರ ಬೆಳಗ್ಗೆ ಏಳನೇ ಹಾಗೂ ಅಂತಿಮ ಸುತ್ತಿನ ಪಂದ್ಯಗಳು ಪ್ರಾರಂಭಗೊಳ್ಳಲಿವೆ. ಇದರಲ್ಲಿ ಮದ್ರಾಸು ವಿವಿ, ಮಂಗಳೂರು ವಿವಿಯನ್ನೂ, ಅಣ್ಣಾ ವಿವಿ, ಎಸ್‌ಆರ್‌ಎಂ ವಿವಿಯನ್ನು ಎದುರಿಸಿ ಆಡಲಿದ್ದು, ಮದರಾಸು ಹಾಗೂ ಅಣ್ಣಾ ವಿವಿಗಳಿಗೆ ಇದು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News