ಸೌದಿ : ರಸ್ತೆ ಅಪಘಾತದಲ್ಲಿ ಎಮಿರೇಟ್ಸ್ ಖಾದರ್, ಮಾವ ಮೃತ್ಯು

Update: 2018-12-06 15:58 GMT

ದಮಾಮ್ , ಡಿ. 6 : ಎಮಿರೇಟ್ಸ್ ಖಾದರ್ ಎಂದೇ ಚಿರಪರಿಚಿತರಾಗಿದ್ದ ಉಡುಪಿ ಸಮೀಪದ ಪರ್ಕಳ ನಿವಾಸಿ ಕೆ. ಅಬ್ದುಲ್ ಖಾದರ್ ಅವರು ಸೌದಿ ಅರೇಬಿಯಾದ ದಮಾಮ್ ಸಮೀಪ  ಗುರುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಕಾರಿನಲ್ಲಿದ್ದ  ಖಾದರ್ ಅವರ ಪತ್ನಿಯ ತಂದೆ ಎಂ.ಕೆ. ಅಬ್ದುಲ್ ಖಾದರ್ ಬಾವಾ (ಬಸರಿಕಟ್ಟೆ ಎಸ್ ಕೋಡಿ ಬಾವಾಕ) ಅವರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. 

ಕಾರಿನಲ್ಲಿದ್ದ ಎಮಿರೇಟ್ಸ್ ಖಾದರ್ ಅವರ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಗಾಯಗೊಂಡಿರುವ ಇಬ್ಬರು ಹೆಣ್ಣು ಮಕ್ಕಳು ದಮಾಮ್ ನ ಜನರಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಇನ್ನಿಬ್ಬರು ಗಂಡು ಮಕ್ಕಳು ಊರಿನಲ್ಲೇ ಇದ್ದರು.

ಉಮ್ರಾ ನಿರ್ವಹಿಸಿ ಕುಟುಂಬ ಸಮೇತ ಜುಬೈಲ್ ಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತೀವ್ರ ಮಂಜು ಕವಿದಿದ್ದರಿಂದ ರಸ್ತೆ ಸರಿಯಾಗಿ ಕಾಣದೆ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಾರನ್ನು ಖಾದರ್ ಅವರ ಪುತ್ರ ಚಲಾಯಿಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬಿ.ಎಂ. ಮುಮ್ತಾಝ್ ಅಲಿ ಮತ್ತಿತರರು ದಮಾಮ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸೌದಿ ಅರೇಬಿಯಾದ ನೆಕ್ಸಸ್ ಗ್ರೂಪ್ ನ ಅಧ್ಯಕ್ಷ ಸಾದ್ ಅಲ್ ಶಾರಾನಿ, ಎಕ್ಸ್ ಪರ್ಟೈಸ್ ಗ್ರೂಪ್ ನ ಅಶ್ರಫ್, ಅಷ್ಫಾಕ್, ಅಸಿಫ್ ಅವರು ಸರಕಾರಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸಿದರು. ಮೃತರ ಅಂತ್ಯಕ್ರಿಯೆ ಸೌದಿಯಲ್ಲೇ ನಡೆಸಲು ಕುಟುಂಬ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News