ಮಂಗಳೂರು: ಜ.19ಕ್ಕೆ ರಾಜೇಂದ್ರಕುಮಾರ್‌ಗೆ ರಜತ ಸಂಭ್ರಮದ ಅಭಿನಂದನೆ

Update: 2018-12-06 17:26 GMT

ಉಡುಪಿ, ಡಿ.6: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು 25 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಜ.19ರಂದು ಅವರನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಸ್ತ ಸಹಕಾರಿಗಳ ಪರವಾಗಿ ಬೃಹತ್ ಮಟ್ಟದಲ್ಲಿ ಅಭಿನಂದಿಸುವ ಕಾರ್ಯಕ್ರಮವೊಂದನ್ನು ಅಭೂತಪೂರ್ವ ರೀತಿಯಲ್ಲಿ ಆಯೋಜಿಸಲಾಗುವುದು ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಗುರುವಾರ ನಗರದ ಡಯಾನ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಹಕಾರಿ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ಸಲ್ಲಿಸಿರುವ ರಾಜೇಂದ್ರಕುಮಾರ್ ಅವರ ರಜತ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಸಂಸ್ಥೆಗಳು ನಿರ್ಧರಿಸಿವೆ ಎಂದರು.

ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ಪ್ರತಿ ತಾಲೂಕು ಮಟ್ಟದಲ್ಲೂ ಪೂರ್ವಭಾವಿ ಸಭೆಗಳನ್ನು ನಡೆಸಿ, ತಾಲೂಕು ಮಟ್ಟದ ಸಭೆಗಳನ್ನು ರಚಿಸಲಾಗುತ್ತಿದೆ ಎಂದರು. ಜ.19ರಂದು ಸಹಕಾರ ಕ್ಷೇತ್ರದ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗುತ್ತದೆ ಎಂದರು.

ಜ.19ರಂದು ಬೆಳಗ್ಗೆ 9:30ರಿಂದ ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕಿನಿಂದ ಆಕರ್ಷಕ, ಸಾಂಪ್ರದಾಯಿಕ ಶೋಭಾ ಯಾತ್ರೆ ನಡೆಯಲಿದೆ. 11:30ಕ್ಕೆ ಸಭಾ ಕಾರ್ಯಕ್ರಮ ನೆಹರೂ ಮೈದಾನದಲ್ಲಿ ಪ್ರಾರಂಭಗೊಳ್ಳಲಿದೆ. ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳ ಸಹಕಾರಿಗಳು, ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಸಹಿತ ಎರಡು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಉಡುಪಿ ತಾಲೂಕೊಂದರಿಂದಲೇ ಅಂದು 25,000 ಮಂದಿ ಭಾಗವಹಿಸಲಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ನುಡಿದರು.

ರಜತ ಸಂಭ್ರಮ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಸಹಿತ ಹಲವು ಕೇಂದ್ರ ಹಾಗೂ ರಾಜ್ಯ ಸಚಿವರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ನೆಹರು ಮೈದಾನದಲ್ಲಿ ಪ್ರಧಾನ ವೇದಿಕೆ ಸಹಿತ ಮೂರು ವೇದಿಕೆಗಳನ್ನು ನಿರ್ಮಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಉಪಾಧ್ಯಕ್ಷರಾದ ರವಿರಾಜ ಹೆಗ್ಡೆ ಕೊಡವೂರು, ಯಶ್ಪಾಲ್ ಸುವರ್ಣ, ಗೌರವ ಸಲಹೆಗಾರರಾದ ಇಂದ್ರಾಳಿ ಜಯಕರ ಶೆಟ್ಟಿ, ಕೆ.ಕೃಷ್ಣರಾಜ ಸರಳಾಯ, ಸರಳಾ ಕಾಂಚನ್, ಅಶೋಕಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ ಹಾವಂಜೆ, ಮಂಜುನಾಥ ಎಸ್.ಕೆ. ಉಪಸ್ಥಿತರಿದ್ದರು.

ಎಸ್‌ಸಿಡಿಸಿಸಿಯ ಭವಿಷ್ಯದ ಯೋಜನೆ
 *ಸಹಕಾರಿ ಕ್ಷೇತ್ರದ ಇತಿಹಾಸ, ವರ್ತಮಾನ ಹಾಗೂ ಭವಿಷ್ಯದ ಆಶಯಗಳನ್ನು ಬಿಂಬಿಸುವ ಸಹಕಾರಿ ಮ್ಯೂಸಿಯಂನ್ನು ಮಂಗಳೂರಿನಲ್ಲಿ ಸ್ಥಾಪನೆ. ಇಲ್ಲಿ ಕರಾವಳಿ ಜಿಲ್ಲೆಗಳ ಸಹಕಾರಿ ಚಳವಳಿಯ ಪಿತಾಮಹರೆನಿಸಿದ ಮೊಳಹಳ್ಳಿ ಶಿವರಾಯರ ಪುತ್ಥಳಿ ಸ್ಥಾಪನೆ.
*ಸಹಕಾರಿ ಕ್ಷೇತ್ರದೊಂದಿಗೆ ಐಟಿ ಕ್ಷೇತ್ರ ಹಾಗೂ ಉದ್ಯೋಗವನ್ನೂ ಬೆಳೆಸುವ ಬಗ್ಗೆ ಚಿಂತನೆ.
*ಸಹಕಾರಿ ಕ್ಷೇತ್ರದೊಂದಿಗೆ ಐಟಿ ಕ್ಷೇತ್ರ ಹಾಗೂ ಉದ್ಯೋಗವನ್ನೂ ಬೆಳೆಸುವ ಬಗ್ಗೆ ಚಿಂತನೆ. *ಸಹಕಾರಿಗಳಿಗಾಗಿ, ನವೋದಯ ಸಂಘದ ಸದಸ್ಯರಿಗಾಗಿ ಸಹಕಾರಿ ಆಸ್ಪತ್ರೆಯ ನಿರ್ಮಾಣ. ಮುಂದೆ ಸಹಕಾರಿ ಮೆಡಿಕಲ್ ಕಾಲೇಜೊಂದರ ಆರಂಭಕ್ಕೆ ಚಿಂತನೆ.
*ರಾಜೇಂದ್ರಕುಮಾರ್ ಅವರ ಸಹಕಾರಿ ಜೀವನದ ಕುರಿತು ಸ್ಮರಣ ಸಂಚಿಕೆ ಬಿಡುಗಡೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News